ತಾ.ಪಂ ಇಒ ತಾಕೀತಿಗೆ ಎಚ್ಚೆತ್ತ ಆನೂರ ಗ್ರಾ.ಪಂ :ಹಾಳಾಗಿದ್ದ ರಸ್ತೆಗೆ ಮುರುಮ್ ಹಾಕಿಸಿ ರಿಪೇರಿ
ಅಫಜಲಪುರ:ಆ.24: ತಾಲೂಕಿನ ಆನೂರ ಗ್ರಾಮದಲ್ಲಿ ನೈರ್ಮಲ್ಯ
ಸಮಸ್ಯೆ ಆಗುತ್ತಿದೆ, ಮುಖ್ಯರಸ್ತೆಗಳು ಹದಗೆಟ್ಟಿವೆ ಎಂದು
ಗ್ರಾಮಸ್ಥರು ಆರೋಪಿಸಿದ ಪ್ರಯುಕ್ತ ಗ್ರಾಮಕ್ಕೆ ತಾ.ಪಂ ಇಒ
ವೀರಣ್ಣ ಕವಲಗಿ ಅವರು ಕಳೆದ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ನೈರ್ಮಲ್ಯ ಸಮಸ್ಯೆ ಕಂಡು
ಪಿಡಿಒ ಹಾಗೂ ಪಂಚಾಯಿತಿಯವರ ವಿರುದ್ದ ಕೆಂಡಾಮಂಡಲರಾಗಿ 2 ದಿನಗಳಲ್ಲಿ ಗ್ರಾಮದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ
ತಾಕೀತು ಮಾಡಿದ್ದರು.
ತಾ.ಪಂ ಇಒ ಅವರ ತಾಕೀತಿಗೆ ಎಚ್ಚೆತ್ತ
ಗ್ರಾ.ಪಂನವರು ಕೆಸರುಗದ್ದೆಯಂತಾಗಿದ್ದ ರಸ್ತೆಗಳಿಗೆ
ತಾತ್ಕಾಲಿಕವಾಗಿ ಮುರುಮ್ ಹಾಕಿಸಿ ರಿಪೇರಿ ಮಾಡಿಸಿದ್ದಾರೆ.
ಗ್ರಾ.ಪಂ ಅಧ್ಯಕ್ಷ ನಿಂಗಣ್ಣ ಕಲಶೆಟ್ಟಿ ಮಾತನಾಡುತ್ತಾ ಗ್ರಾಮದ ಮುಖ್ಯ ರಸ್ತೆಗಳಿಗೆ ಮುರುಮ್ ಹಾಕಿಸಿ ಕೆಸರು ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಉಳಿದಂತೆ ಎಲ್ಲೆಲ್ಲಿ ಚರಂಡಿ ನೀರು ನಿಲ್ಲುತ್ತಿದೆ ಗುರುತಿಸಿ ನೀರು ನಿಲ್ಲದಂತೆ ವ್ಯವಸ್ಥೆ
ಮಾಡಿಸಲಾಗುತ್ತದೆ. ಗಿಡಗಂಟಿ ಬೆಳೆದಿರುವುದನ್ನು ಕಡಿದು ನೈರ್ಮಲ್ಯ ಸಮಸ್ಯೆ ಬಾರದಂತೆ ವ್ಯವಸ್ಥೆ ಮಾಡಿಸುತ್ತೇವೆ. ಗ್ರಾಮದ ಅಭಿವೃದ್ದಿ ಕೆಲಸಗಳಿಗೆ ಗ್ರಾಮಸ್ಥರ ಸಹಕಾರ ತುಂಬಾ ಅವಶ್ಯಕ ಎಂದಿದ್ದಾರೆ.
ತಾ.ಪಂ ಇಒ ಅವರ ಭೇಟಿಯಿಂದಾಗಿ ಗ್ರಾಮದಲ್ಲಿ ರಸ್ತೆಗಳ ಸುಧಾರಣೆ, ಚರಂಡಿ ಸ್ವಚ್ಚತೆ, ಅಲ್ಲಲ್ಲಿ ಬೆಳೆದಿರುವ ಜಾಲಿಕಂಟಿಗಳ ತೆರವುಗೊಳಿಸುವುದು ಮಾಡಲಾಗುತ್ತಿದೆ. ಅಧಿಕಾರಿಗಳ ಭೇಟಿ
ಫಲಪ್ರದವಾಗಿದ್ದು ಪಂಚಾಯಿತಿ ಪಿಡಿಒ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಕೆಲಸ ಮಾಡುವಂತಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.