ರಂಗ ಮಂದಿರ ಸರ್ಕಲ್ ನಲ್ಲಿ ಸಂಗೊಳ್ಳಿ ರಾಯಣ್ಣನಪ್ರತಿಮೆ ಅನಾವರಣಕ್ಕೆ ಸರ್ಕಾರ ನಿರಾಕರಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,24- ಕಳೆದ ಒಂದುವರೆ ವರ್ಷಗಳ ಹಿಂದೆ ರಾತ್ರೋ ರಾತ್ರಿ ನಗರದ ರಂಗ ಮಂದಿರ ಸರ್ಕಲ್ ನ ಬುಡಾ ಪಾರ್ಕ್ ಆವರಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಈ ಪ್ರತಿಮೆ ಸ್ಥಾಪನೆಯಾಗಿತ್ತು. ಇದಕ್ಕೆ ಬುಡಾದಿಂದಾಗಲಿ, ಪಾಲಿಕೆಯಿಂದಾಗಲಿ ಅನುಮತಿ‌ ಇರಲಿಲ್ಲ. ಇದರಿಂದಾಗಿ ಉದ್ಘಾಟನೆಯಾಗದೆ ಇಡೀ ಪ್ರತಿಮೆಗೆ ಕವರ್ ಸುತ್ತಲಾಗಿದೆ. ರಾಯಣ್ಣನ ಕ್ರಾಂತಿ‌ ಕವರ್ ನಲ್ಲಿಯೇ ಕಮರುವಂತಾಗಿದೆ.
ಆಗ 2023 ರ ವಿಧಾನಸಭಾ ಚುನಾವಣೆಯ ಕಾಲ. ನಗರದಲ್ಲಿ ಹಲವಾರು ಗಣ್ಯರ ಪ್ರತಿಮೆಗಳನ್ನು ಸ್ಥಾಪಿಸಲು ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀರಾಮುಲು ಅವರು ಮುಂದಾಗಿದ್ದರು. ಪೈಲ್ವಾನ್ ರಂಜಾನ್ ಸಾಬ್ ಪ್ರತಿಮೆಯನ್ನು ಸಾಂಸ್ಕೃತಿಕ ಸಮುಚ್ಚಯದಲ್ಲಿ. ನಟ ಪುನೀತ್ ಪ್ರತಿಮೆಯನ್ನು ಜಿಲ್ಲಾ ಕ್ರೀಡಾಂಗಣದ ಕೆರೆಯ ಬಳಿ, ಗಾಂಧಿ ಪ್ರತಿಮೆಯನ್ನು ರಾಜಕುಮಾರ್ ಪಾರ್ಕ್ ನಲ್ಲಿ ಸ್ಥಾಪಿಸಿದರು. ಆದರೆ ರಾಯಣ್ಣ ಪ್ರತಿಮೆಯನ್ನು ರಂಗ ಮಂದಿರದ ಸರ್ಕಲ್ ನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದರು ಅದಕ್ಕೆ ಅವಕಾಶ ಇಲ್ಲದ ಕಾರಣ ಈಗ ಇರುವ ಸ್ಥಳದಲ್ಲಿ ಸ್ಥಾಪಿಸಿತ್ತು.  ತಮ್ಮ ಪಾರ್ಕ್‌ ಸ್ಥಳದಲ್ಲಿ  ಈ ಪ್ರತಿಮೆ ಇಡಲು ಅನುಮತಿ‌ ನೀಡಿಲ್ಲ ಎಂದು ಬುಡಾ ಹೇಳಿತ್ತು.
ಚುನಾವಣೆ ಘೋಷಣೆಯಾಯ್ತು ಬಿಜೆಪಿಗರು ಮನೆ ಸೇರಿದರು. ಕಾಂಗ್ರೆಸ್ ನ ಕುರುಬ ಸಮುದಾಯದ ಸಿದ್ದರಾಮಯ್ಯ ಅವರು ಸಿಎಂ ಆದರು. ಅವರಿಂದ ಈ ಪ್ರತಿಮೆ ಅನಾವರಣ ಮಾಡಿಸಲಿದೆಂದು ಕುರುಬ ಸಮುದಾಯದ ಸಂಘಟನೆಯ ಮುಖಂಡರು ಹೇಳಿದರು, ಈವರೆಗೆ ಆಗಲಿಲ್ಲ.  ಚಳಿ, ಮಳೆ, ಗಾಳಿ, ಬಿಸಿಲಿಗೆ ರಾಯಣ್ಣನ ಶೌರ್ಯ ಸುತ್ತಿದ ಪ್ಲಾಸ್ಟಿಕ್ ಕವರ್ ನಲ್ಲಿ ಕಮರುತ್ತಿದೆ.
ಈ ಮಧ್ಯೆ ರಂಗ ಮಂದಿರ ಸರ್ಕಲ್ ನಲ್ಲಿ  ಸ್ಥಾಪನೆಗೆ ಅನುಮತಿ ನೀಡಬೇಕೆಂದು ಮಹಾನಗರ ಪಾಲಿಕೆಯಿಂದ ಪೌರಾಡಳಿತ ಸಚಿವಾಲಯಕ್ಕೆ ಪ್ರಸ್ತಾವನೆ ಕಳಿಸಿತ್ತು.
ಪೌರಾಡಳಿತ ಸಚಿವಾಲಯದ ನಿರ್ದೇಶಕರು  ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಅನುಮತಿ ಕೋರಿದ್ದರು.
ಆದರೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅವರು ನಗರದ ವಾರ್ಡ ನಂ.3 ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ವೃತ್ತದಲ್ಲಿ ಸ್ವಾತಂತ್ರ್ಯ ಸೇನಾನಿ ‘ಸಂಗೊಳ್ಳಿ ರಾಯಣ್ಣ ರವರ ಪುತ್ತಳಿ’ ಸ್ಥಾಪನೆ ಮಾಡುಲು ಅವಕಾಶವಿರುವುದಿಲ್ಲವೆಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ನಾಗೇಶ್ ಕೆ. ಅವರು  ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಬಳ್ಳಾರಿ ನಗರದ ವಾರ್ಡ ನಂ. 03 ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ವೃತ್ತದಲ್ಲಿ ಸ್ಥಾತಂತ್ರ ಸೇನಾನಿ ಸಂಗೊಳ್ಳಿ ರಾಯಣ್ಣ ರವರ ಪುತ್ತಳಿ’ ಸ್ಥಾಪನೆ ಮಾಡಲು ಅನುಮತಿ ನೀಡುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ.
 ಸರ್ವೋಚ್ಚ ನ್ಯಾಯಾಲಯದ 2009 ರ ಆದೇಶ  ಮತ್ತು ರಾಜ್ಯ ಹೈಕೋರ್ಟಿನ 2021 ರ ಆದೇಶ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ 17-12-2012 ರ ಸುತ್ತೋಲೆಯನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಸ್ಥಾಪಿಸುವುದನ್ನು ನಿರ್ಬಂಧಿಸಿರುವುದರಿಂದ ಬಳ್ಳಾರಿ ನಗರದ  ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ವೃತ್ತದಲ್ಲಿ ಸ್ವಾತಂತ್ರ್ಯ ಸೇನಾನಿ “ಸಂಗೊಳ್ಳಿ ರಾಯಣ್ಣ ರವರ ಪುತ್ಥಳಿ ಸ್ಥಾಪನೆ ಮಾಡಲು ಅವಕಾಶವಿರುವುದಿಲ್ಲವೆಂದು ನಿರ್ದೇಶಿಸಿ ಆ.14 ರಂದು ಪತ್ರ ಬರೆದಿದ್ದಾರೆ.
ಇದರಿಂದಾಗಿ ಈ ಸ್ವತಂತ್ರ ಸೇನಾನಿ ಪ್ರತಿಮೆಗೆ ಮುಕ್ತಿ ದೊರೆಯುವ ಕಾಲ ಇನ್ನೂ ಸನ್ನಿಹಿತವಾಗಿಲ್ಲ ಎನ್ನಬಹುದು.
ಸಮುದಾಯವೊಂದನ್ನು ಮೆಚ್ಚಿಸಲು ಈ ರೀತಿ ಪ್ರತಿಮೆಗಳನ್ನು ಸಕ್ರಮ ಪ್ರಾಧಿಕಾರಗಳ ಅನುಮತಿ‌ ಪಡೆಯದೆ ಸ್ಥಾಪಿಸಿ ಈ ರೀತಿ ಮುಖ ಮುಚ್ಚಿಟ್ಟು ಅವಮಾನಿಸುವುದನ್ನು ಇನ್ನಾದರೂ ರಾಜಕಾರಣಿಗಳು ಬಿಡಬೇಕಿದೆ.
ಕೋಟ್:
ಸಪ್ರೀಂ ಕೋರ್ಟ್ ಸರ್ಕಲ್ ಗಳಲ್ಲಿ ಪ್ರತಿಮೆಗಳ ಅನಾವರಣ ಬೇಡ ಎಂದು ಹೇಳಿದ್ದರೂ ಮತ್ತೆ,ಮತ್ತೆ ನಾವು ಕೇಳುತ್ತಿರುವುದು ಸರಿಯಲ್ಲ. ಆದರೂ ಸಂಘ ಸಂಸ್ಥೆಗಳ ಮನವಿ ಮೇರೆಗೆ ಕೇಳಿತ್ತು. ನಗರಾಭಿವೃದ್ಧಿ ಇಲಾಖೆ ನಿರಾಕರಿಸಿದೆ. ಮುಂದೇನು ಎಂಬುದನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಿದೆ
ಮುಲ್ಲಂಗಿ ನಂದೀಶ್
ಮೇಯರ್, ಬಳ್ಳಾರಿ.