ಜಿಂದಾಲ್ ಕಂಪನಿಗೆ ಸರಕಾರಿ ಭೂಮಿ ಮಾರಾಟ:ಸಿಪಿಐಎಂ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹೊಸಪೇಟೆ: ಅ,24- ಜಿಂದಾಲ್ ಜೆಎಸ್‍ಡಬ್ಲ್ಯೂ ಸ್ಟೀಲ್ ಕಂಪನಿಗೆ 3,667 ಎಕರೆ ಸರ್ಕಾರಿ ಜಮೀನನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ನಿರ್ಧರಿಸುವ ಸಚಿವ ಸಂಪುಟದ ಕ್ರಮವನ್ನು ಖಂಡಿಸಿ, ಸಿಪಿಐಎಂ ಕಾರ್ಯಕರ್ತರು, ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.  
ಜಿಂದಾಲ್ ಕಂಪನಿಗೆ ನೀಡಲು ತೀರ್ಮಾನಿಸಿರುವ ಒಟ್ಟು 3,667 ಎಕರೆಯ ಮಾರಾಟದ ಮೌಲ್ಯ 11,001 ಕೋಟಿ ರೂ ಆಗಿರುತ್ತದೆ. ಅಭಿವೃದ್ಧಿ ಪಡಿಸಲಾದ ಮೊತ್ತ ಶೇ 40 ಕಳೆದರೂ ಅದರ ಮೌಲ್ಯ ಸುಮಾರು 7,000 ಕೋಟಿ ರೂ ಗಳಾಗುತ್ತದೆ. ಆದರೆ, ಸರಕಾರ ಈಗ 1,667 ಎಕರಗೆ ಕೇವಲ 1,20 ಲಕ್ಷ ರೂಗಳಂತೆ, 24.40 ಕೋಟಿ ನಿಗದಿ ಪಡಿಸಿದೆ. ಉಳಿದ 2,000 ಎಕರೆಗೆ ಕೇವಲ 1.5 ಲಕ್ಷ ರೂಗಳಂತೆ ಸುಮಾರು 25 ಕೋಟಿ ರೂ ನಿಗದಿಸಿ, ಒಟ್ಟು 50 ಕೋಟಿ ರೂಗಳಿಗೂ ಕಡಿಮೆ ದರಕ್ಕೆ ಮಾರಾಟಕ್ಕೆ ಕ್ರಮ ವಹಿಸಿರುವುದು ಖಂಡನೀಯವಾಗಿದೆ. ಇದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಸುಮಾರು 10,950 ಕೋಟಿ ರೂಗಳಷ್ಠು ನಷ್ಠ ಉಂಟಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹುತೇಕ ಕಂಪನಿಗಳ ಜೊತೆ ಕೆಐಏಡಿಬಿ ಮತ್ತು ಮಂತ್ರಿಮಂಡಲ ಶಾಮೀಲಾಗಿ ರೈತರನ್ನು ವಂಚಿಸಿ, ಬಲವಂತವಾಗಿ, ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ, ದೊಡ್ಡ ದೊಡ್ಡ ಕಂಪನಿಗಳಿಗೆ ಸಾವಿರಾರು ಎಕರೆ ಜಮೀನುಗಳನ್ನು ಗುತ್ತಿಗೆ ಜೊತೆ ಮಾರಾಟ ಒಪ್ಪಂದದಂತೆ ನೀಡುತ್ತಿರುವುದು ನಾಡಿನ ಜನರಿಗೆ ಮಾಡಿದ ಮೋಸವಾಗಿದೆ ಎಂದರು. 
ಕಂಪನಿಗಳಿಗೆ ಕೆಐಎಡಿಬಿ ನೀಡಿದ ಹತ್ತಾರು ಸಾವಿರ ಎಕರೆ ಜಮೀನುಗಳಿಗೆ, ಪ್ರತಿವರ್ಷ ತಲಾ ಎಕರೆಗೆ ಬಹುತೇಕ ಕೇವಲ, 100 ರೂ. ಗಳಿಂದ 1,000 ರೂಗಳಿಗೆ ಗುತ್ತಿಗೆ ಹಣ ನಿಗದಿಸಲಾಗಿದೆ. ಕೆಲವು ಕಂಪನಿಗಳಿಗೆ ತಲಾ ಎಕರೆಗೆ 10,000 ರೂ ನಿಗದಿ ಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಹೊರಗಡೆ ರೈತರು ಗುತ್ತಿಗೆಗೆ ಪಡೆದ ಜಮೀನುಗಳಿಗೆ ನೀರಾವರಿ ಪ್ರದೇಶದಲ್ಲಿ ತಲಾ ಎಕರೆಗೆ 25 ರಿಂದ 30 ಸಾವಿರ ರೂ ದರ ನೀಡುತ್ತಿರುವಾಗ ರಾಜ್ಯ ಸರಕಾರ ಮತ್ತು ಕಂಪನಿಗಳಿಗೆ ಇಷ್ಠು ಕಡಿಮೆ ಬೆಲೆಗೆ ನೀಡುವುದೇಕೆ ? ಈ ಕೂಡಲೆ ಗುತ್ತಿಗೆಯ ಮೊತ್ತವನ್ನು ಕನಿಷ್ಟ 30,000 ರೂ ಗೆ ಹೆಚ್ಚಿಸಬೇಕು ಮತ್ತು ಇದರಲ್ಲಿ  ಜಮೀನು ನೀಡಿದ ರೈತ ಕುಟುಂಬಕ್ಕೆ ತಲಾ ಎಕರೆಗೆ 25,000 ರೂ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ, ಜೆಡಿಎಸ್ ಸರ್ಕಾರ ಅಧಿಕಾರದ ಅವಧಿಯಲ್ಲಿ ಜಿಂದಾಲ್ ಕಂಪನಿಗೆ ಈ ಜಮೀನುಗಳ ಕ್ರಯ ಪತ್ರಕ್ಕೆ ಕ್ರಮ ಕೈಗೊಂಡಿದ್ದನ್ನು ತೀವ್ರ ವಿರೋಧ ಪಡಿಸಿದ್ದ ಕಾಂಗ್ರೆಸ್ ಪಕ್ಷ ಇದೀಗ ಅಧಿಕಾರಕ್ಕೆ ಬರುತ್ತಿಂದತೇ ಕಡಿಮೆ ಬೆಲೆಗೆ ಮಾರಾಟ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿದೆ. ಈ ಹಿಂದೆ ವಿಧಾನ ಸಭೆಯಲ್ಲಿ ತೀವ್ರವಾಗಿ ವಿರೋದಿಸಿದ್ದ ಹೆಚ್.ಕೆ. ಪಾಟೀಲ್ ಅವರು ಇದೀಗ ಕಾನೂನು ಸಚಿವರಾಗಿ ಇತಂಹ ಕ್ರಮಕ್ಕೆ ಮುಂದಾಗಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಕಿಡಿ ಕಾರಿದರು.
ಮುಖಂಡರಾದ ಆರ್ ಭಾಸ್ಕರ್ ರೆಡ್ಡಿ, ಆರ್ ಎಸ್ ಬಸವರಾಜ, ಮಾಳಮ್ಮ,  ಎ ಕರುಣಾನಿಧಿ, ಕೆ ನಾಗರತ್ನಮ್ಮ, ಜಗನ್ನಾಥ್, ವಿ ಸ್ವಾಮಿ, ಸ್ವಪ್ನ, ರೇಣುಕಮ್ಮ, ವಿರೂಪಾಕ್ಷಪ್ಪ ಎಂ ಗೋಪಾಲ್ ಇತರರಿದ್ದರು.