ಸರ್ಕಾರಿ ಆಸ್ಪತ್ರೆಗೆ ಡಿಸಿ ದಿವಾಕರ್ ದಿಢೀರ್ ಭೇಟಿ:ಪರಿಶೀಲನೆ
ಸಂಜೆವಾಣಿ ವಾರ್ತೆ
ಹೊಸಪೇಟೆ: ಅ,24- ನಗರದ ಸರ್ಕಾರಿ ಸಾರ್ವಜನಿಕ (ನೂರು ಹಾಸಿಗೆ) ಆಸ್ಪತ್ರೆಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧಿ ಆಸ್ಪತ್ರೆಯಲ್ಲೇ ನೀಡಬೇಕು. ಹೊರಗಡೆ ಚಿಕಿತ್ಸೆಗೆ ಹಾಗೂ ಔಷಧಿಗಳನ್ನು ಖರೀದಿಸಲು ರೋಗಿಗಳಿಗೆ ಚೀಟಿ ಬರೆಯಬಾರದು. ಒಂದೊಮ್ಮೆ. ಇತಂಹ ಪ್ರಕರಣಗಳು ಬೆಳಕಿಗೆ ಬಂದರೆ ಅಂತಹ ವೈದ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ವೈದ್ಯರ ಭೇಟಿ ಸಲುವಾಗಿ ಚೀಟಿ ಪಡೆಯಲು ಕೌಂಟರ್ ಮುಂದೆ ಜಮಾಯಿಸಿದ ಸಾರ್ವಜನಿಕರನ್ನು ಗಮಿಸಿ, ಕೂಡಲೇ ಹೆಚ್ಚುವರಿ ಕೌಂಟರ್ ತೆರೆಯುವಂತೆ ಸೂಚಿಸಿದರು. ಸಾರ್ವಜನಿಕರಿಗೆ ಅಗತ್ಯ ಆಸನದ ವ್ಯವಸ್ಥೆ, ಆಸ್ಪತ್ರೆಯ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳ ಲಭ್ಯತೆ ಕುರಿತು  ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಅಗತ್ಯ ಔಷಧಿ ಹಾಗೂ ಉಪಕರಣಗಳನ್ನು 15 ದಿನಗಳೊಳಗಾಗಿ ಖರೀದಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು.
ಹೊರರೋಗಿ ವಿಭಾಗ (ಒಪಿಡಿ)ಯನ್ನು ಆಸ್ಪತ್ರೆ ಕಟ್ಟಡದ ಹೊರಾಂಗಣದಲ್ಲಿ ಸ್ಥಳಾಂತರಿಸಬೇಕು. ಶೀಘ್ರ 10 ಬೆಡ್‍ಗಳ ಐ.ಸಿ.ಯು. ಘಟಕ ಸ್ಥಾಪಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ, ವೈದ್ಯರು ಹಾಗೂ ಸಿಬ್ಬಂದಿ ಇದ್ದರು.