ರಾಷ್ಟ್ರ ಧ್ವಜ-ರಾಷ್ಟ್ರ ಗೀತೆಯ ಕಾರ್ಯಾಗಾರ ಯಶ್ವಸಿ
ಸಂಜೆವಾಣಿ ವಾರ್ತೆ
ಹೊಸಪೇಟೆ:ಅ,24- ವಿಜಯನಗರ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಸೇವಾದಳ ಸಂಘಟಕರಿಗಾಗಿ ನಗರದ ಚಿತ್ತವಾಡ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಗೀತೆಯ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಶುಕ್ರವಾರ ನಡೆಯಿತು.
ಸೇವಾದಳದ ಜಿಲ್ಲಾ ಸಂಘಟಕ ಸಾಲಿ ಸಿದ್ದಯ್ಯ ಸ್ವಾಮಿ, ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ, ರಾಷ್ಟ್ರ ಧ್ವಜ, ರಾಷ್ಟ್ರ ಗೀತೆಯ ಕುರಿತು ಆಗಾಗ ತಿಳುವಳಿಕೆ ನೀಡಿ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಸೇವಾದಳದ ಜಿಲ್ಲಾ ಸಂಚಾಲಕ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸೇವಾದಳದ ಸ್ಥಾಪನೆ, ಧ್ಯೇಯೋದ್ದೇಶಗಳು, ಏರ್ಪಡಿಸಬೇಕಾದ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಿತ್ತವಾಡಿಗಿಯ ಪ್ರಾಚಾರ್ಯರು ಹಾಗೂ ವಿಜಯನಗರ ಜಿಲ್ಲಾ ನೋಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್ ಮಾತನಾಡಿ, ಬಹುತೇಕ ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆ ಇರುವುದಿಲ್ಲ. ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಾಗ ಪ್ರತಿ ಬಾರಿ ಪ್ರೌಢಶಾಲೆಗಳ ದೈಹಿಕ ಶಿಕ್ಷಕರನ್ನು ಅವಲಂಬಿಸಬೇಕಾಗಿರುತ್ತದೆ. ಆದ್ದರಿಂದ ಈ ತರಬೇತಿ ಕಾರ್ಯಾಗಾರದ ಮೂಲಕ ಪ್ರತಿಯೊಂದು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರನ್ನು ರಾಷ್ಟ್ರ ಧ್ವಜದ ಹಾಗೂ ರಾಷ್ಟ್ರ ಗೀತೆಯ ಕುರಿತು ತರಬೇತಿ ನೀಡಿ ಅವರನ್ನು ಸನ್ನದ್ಧುಗೊಳಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ ಎಂದರು. ನಿವೃತ್ತ ದೈಹಿಕ ಶಿಕ್ಷಕ ಪಾಂಡುರಂಗ ರಾವ್ ವಂದಿಸಿದರು. ಜಿಲ್ಲೆಯ ವಿವಿಧ ಕಾಲೇಜುಗಳ ಉಪನ್ಯಾಸಕರು ಉಪಸ್ಥಿತರಿದ್ದರು.