ನಿಯಮ ಉಲ್ಲಂಘಿಸುವ ಚಾಲಕರ ಮೇಲೆ ಕ್ರಮ
ಬಾಗಲಕೋಟೆ,ಆ.24: ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ಲೈಸನ್ಸ್ ಅಮಾನತ್ತುಗೊಳಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹೊಸದಾಗಿ ಚಾಲನಾ ಪತ್ರ ಪಡೆಯಲು ಬರುವ ಚಾಲಕರಿಗೆ ಒಂದು ಗಂಟೆಗಳ ಕಾಲ ತರಬೇತಿ ನೀಡಲಾಗುತ್ತಿದೆ. ಚಾಲನಾ ಪತ್ರದ ಮಹತ್ವ, ಹೆಲ್ಮೆಟ್ ಧರಿಸಿ ಚಾಲನೆ ಮಾಡುವುದು, ವಾಹನವನ್ನು ವಿಮೆಗೆ ಒಳಪಡಿಸುವುದು ಸೇರಿದಂತೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿದ ನಂತರ ಪರೀಕ್ಷೆ ತೆಗೆದುಕೊಂಡ ನಂತರ ಪರವಾನಿಗ ಪತ್ರ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕಳೆದ ಎಪ್ರೀಲ್‍ನಿಂದ ಜುಲೈ ವರೆಗೆ ಪೊಲೀಸ್ ಮತ್ತು ನ್ಯಾಯಾಲದಿಂದ ಬಂದಿರುವ 147 ಚಾಲನಾ ಅನುಜ್ಞಾಪನಾ ಪತ್ರಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ 130ನ್ನು ಅಮಾನತ್ತು ಗೊಳಿಸಲಾಗಿದೆ. ಬಾಕಿ 17 ಪ್ರಕರಣಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿ ಅಪಘಾತ ಉಂಟು ಮಾಡಿ ಪ್ರಕರಣದ ದಾಖಲು ಆದಲ್ಲಿ ಅಂತವರ ಚಾಲನಾ ಲೈಸೆನ್ಸ್ ರದ್ದರಿಗೆ ಕ್ರಮವಹಿಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ರಸ್ತೆ ಮತ್ತು ಹೆದ್ದಾರಿ ಪಕ್ಕದಲ್ಲಿರುವ ಡಾಬಾ ಮತ್ತು ಹೋಟೆಲ್‍ಗಳಲ್ಲಿ ಅಕ್ರಮವಾಗಿ ಮಧ್ಯಮಾರಾಟ ಮಾರಾಟದಿಂದ ಅಪಘಾತ ಪ್ರಕರಣಗಳು ಕಂಡುಬರುತ್ತಿದ್ದವು. ಈ ಹಿನ್ನಲೆಯಲ್ಲಿ ಕ್ರಮಕೈಗೊಳ್ಳಲು ಅಬಕಾರಿ ಇಲಾಖೆಗೆ ಸೂಚಿಸಿದ ಹಿನ್ನಲೆಯಲ್ಲಿ 39 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯ ಪ್ರತಿ ಶಾಲೆ-ಕಾಲೇಜುಗಳ ಓರ್ವ ಶಿಕ್ಷಕರಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳ ಕುರಿತು ತರಬೇತಿ ನೀಡಿ ಅವರ ಮೂಲಕ ಮಕ್ಕಳಿಗೆ ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾರಾಯಣ ಕುಲಕರ್ಣಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಲ್.ಹೊಸಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.