ಬುರ್ಖಾಧಾರಿ ಮಹಿಳೆಯಿಂದ ಯುವಕನಿಗೆ ಹಲ್ಲೆ- ಫ್ಯಾನ್ಸಿ ಅಂಗಡಿಗೆ ದುಷ್ಕರ್ಮಿಯಿಂದ ಬೆಂಕಿ
ಪುತ್ತೂರು : ನಡುರಸ್ತೆಯಲ್ಲಿ ಅಟೋ ರಿಕ್ಷಾವೊಂದನ್ನು ನಿಲ್ಲಿಸಿರುವುದನ್ನು ಪ್ರಶ್ನಿಸಿದ ಕಾರಣಕ್ಕಾಗಿ ರಿಕ್ಷಾ ಚಾಲಕ ಹಾಗೂ ಇನ್ನೊಬ್ಬ ಸೇರಿಕೊಂಡು ಕಾರಿನಲ್ಲಿದ್ದ ನಾಲ್ವರನ್ನು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿದ ಮತ್ತು ಬುರ್ಖಾಧಾರಿ ಮಹಿಳೆಯೊಬ್ಬರು ಕಾರಿನಲ್ಲಿದ್ದ ಯುವಕನೊಬ್ಬನ ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದ ಘಟನೆ ಗುರುವಾರ ತಡರಾತ್ರಿ ಪುತ್ತೂರಿನಲ್ಲಿ ನಡೆದಿದೆ.
ಹಲ್ಲೆಗೊಳಗಾಗಿರುವ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಕಲ್ಲಮೂಲೆ ನಿವಾಸಿ ಪುನೀತ್ ಅವರು ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪುತ್ತೂರಿನಲ್ಲಿ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡಿ ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ‘ಬ್ಲಾಕ್ ಡೈಮಂಡ್ ಫ್ಯಾನ್ಸಿ ಅಂಗಡಿಯ ಎದುರು ರಸ್ತೆಯ ಮಧ್ಯೆ ಅಟೋ ರಿಕ್ಷಾವೊಂದನ್ನು ನಿಲ್ಲಿಸಲಾಗಿತ್ತು. ಕಾರು ಚಾಲಕ ಸಂತೋಷ್ ಅವರು ತಿರುವು ರಸ್ತೆಯ ಭಾಗದಲ್ಲಿ ರಸ್ತೆ ಮಧ್ಯೆ ಅಟೋ ರಿಕ್ಷಾವನ್ನು ನಿಲ್ಲಿಸಿ ಯಾಕೆ ತೊಂದರೆ ಕೊಡುತ್ತೀರಿ ಎಂದು ಅಟೋ ರಿಕ್ಷಾ ಚಾಲಕನಲ್ಲಿ ಕೇಳಿದ್ದರು. ಈ ವೇಳೆ ರಿಕ್ಷಾ ಚಾಲಕ ಹಾಗೂ ಅದರಲ್ಲಿದ್ದ ಪ್ರಯಾಣಿಕರೊಬ್ಬರು ರಿಕ್ಷಾದಿಂದ ಇಳಿದು ಬಂದು ಕಾರನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗದಂತೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ಧಗಳಿಂದ ಬೈದರು. ಇದನ್ನು ನೋಡುತ್ತಿದ್ದ ಬ್ಲಾಕ್ ಡೈಮಂಡ್ ಪ್ಯಾನ್ಸಿ-ಬಟ್ಟೆ ಅಂಗಡಿಯಲ್ಲಿದ್ದ ಬುರ್ಖಾಧಾರಿ ಮಹಿಳೆ ಏಕಾಏಕಿಯಾಗಿ ಬಂದು ಕೈಯಿಂದ ತನ್ನ ಕೆನ್ನೆಗೆ ಹೊಡೆದರು. ಬಳಿಕ ರಿಕ್ಷಾಚಾಲಕ, ಅದರಲ್ಲಿದ್ದ ಪ್ರಯಾಣಿಕ ಹಾಗೂ ಬುರ್ಖಾಧಾರಿ ಮಹಿಳೆ ನಿಮ್ಮನ್ನು ಮುಂದಕ್ಕೆ ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆಯೊಡ್ಡಿ ಅಟೋ ರಿಕ್ಷಾದಲ್ಲಿ ಅಲ್ಲಿಂದ ಹೊರಟು ಹೋದರು ಎಂದು ಪುನೀತ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಂಗಡಿಗೆ ಬೆಂಕಿ ಹಚ್ಚುವ ಯತ್ನ
ಮಹಿಳೆ ಮತ್ತು ಇತರರಿಂದ ಹಲ್ಲೆ ನಡೆದ ಪ್ರಕರಣದ ಬ್ಲಾಕ್ ಡೈಮಂಡ್ ಫ್ಯಾನ್ಸಿ-ಬಟ್ಟೆ ಅಂಗಡಿಗೆ ತಡರಾತ್ರಿ ವೇಳೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಲು ಯತ್ನಿಸಿದ ಘಟನೆಯೂ ನಡೆದಿದೆ. ರಾತ್ರಿ ಸುಮಾರು ೨.೩೦ ರವೇಳೆಗೆ ದುಷ್ಕರ್ಮಿಯೋರ್ವ ಬೈಕಿನಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿ ಅಂಗಡಿಯ ಶೆಟರ್ ಬದಿಗೆ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟಿದ್ದಾನೆ. ಆದರೆ ಬೆಂಕಿ ಅದರಷ್ಟಕ್ಕೆ ನಂದಿ ಹೋದ ಪರಿಣಾಮವಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಗೆ ಸಂಬಂಧಿಸಿ ಬ್ಲಾಕ್ ಡೈಮಂಡ್ ಪ್ಯಾನ್ಸಿ ಅಂಗಡಿಯ ಮಾಲಕ ಶಫೀಕ್ ಎಂಬವರು ಕೂಡ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.