ಸ್ವ-ಉದ್ಯೋಗದಿಂದ ಸ್ವಾವಲಂಬಿ ಜೀವನ, ಆರ್ಥಿಕ ಪ್ರಗತಿ
ಧರ್ಮಸ್ಥಳದಲ್ಲಿ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ
ಉಜಿರೆ: ಸ್ವ-ಉದ್ಯೋಗದಿಂದ ಆರ್ಥಿಕ ಪ್ರಗತಿಯೊಂದಿಗೆ ಸ್ವಾವಲಂಬಿ ಜೀವನ ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಗುರುವಾರ ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ತರಬೇತಿ ಪಡೆದವರು ಸ್ಥಳೀಯ ಸಂಪನ್ಮೂಲ ಹಾಗೂ ಬೇಡಿಕೆಗಳಿಗೆ ಅನುಗುಣವಾಗಿ ಸ್ವ-ಉದ್ಯೋಗ ಪ್ರಾರಂಭಿಸಿ, ಸಾಲದ ಹಣವನ್ನು ಸದುಪಯೋಗ ಮಾಡಿ, ಕೌಲಾಭಿವೃದ್ಧಿಯೊಂದಿಗೆ ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸುವಂತೆ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳು ಸಕಾಲಿಕ ಮಾಹಿತಿ, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಬೇಕು. ಯಾವುದೇ ಸಮಸ್ಯೆಗಳು, ಸವಾಲುಗಳು ಉಂಟಾದಾಗ ಅದನ್ನು ಪರಿಹರಿಸಲು ಸಹಕರಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ತರಬೇತಿ ಪಡೆದವರು ಇರುವ ಊರಿನಲ್ಲೆ ಅಲ್ಪ ಬಂಡವಾಳದೊಂದಿಗೆ ಸ್ವ-ಉದ್ಯೋಗ ಪ್ರಾರಂಭಿಸಿದರೆ ಗ್ರಾಮೀಣ ಪ್ರದೇಶವರು ನಗರಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಬಹುದು.
ಬ್ಯೂಟಿಪಾರ್ಲರ್, ಛಾಯಾಗ್ರಹಣ, ವೀಡಿಯೋಗ್ರಫಿ ಮೊದಲಾದ ಸೇವಾಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಬಳಕೆಯಿಂದ ಅನೇಕ ಕ್ಷಿಪ್ರಪರಿವರ್ತನೆಗಳಾಗುತ್ತಿದ್ದ ಬದಲಾದ ವಿದ್ಯಮಾನಕ್ಕೆ ಸ್ವ-ಉದ್ಯೋಗಿಗಳು ಹೊಂದಿಕೊಳ್ಳಬೇಕು ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.
ಯಾವುದೇ ಸಮಸ್ಯೆ ಬಂದಲ್ಲಿ ರುಡ್‌ಸೆಟ್ ಸಂಸ್ಥೆಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಎಲ್ಲಾ ರುಡ್‌ಸೆಟ್ ಸಂಸ್ಥೆಗಳ ಸೇವೆ-ಸಾಧನೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು. ಮುಂದೆ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವಂತಾಗಲಿ ಎಂದು ಅವರು ಶುಭ ಹಾರೈಸಿದರು.
ಕೆನರಾ ಬ್ಯಾಂಕ್ ಪ್ರಧಾನ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಭವೇಂದ್ರ ಕುಮಾರ್ ಶುಭಾಶಂಸನೆ ಮಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆಯೊಂದಿಗೆ ಸಮಾಜದ ಆರ್ಥಿಕ ಪ್ರಗತಿಗೆ ರುಡ್‌ಸೆಟ್ ಸಂಸ್ಥೆಗಳ ಸೇವೆ, ಕೊಡುಗೆ ಅಮೂಲ್ಯವಾಗಿದೆ. ಬಡವರು ಮತ್ತು ಅವಕಾಶ ವಂಚಿತರು ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಲು ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರ ಸೇವೆಯನ್ನು ಅವರು ಶ್ಲಾಘಿಸಿದರು.
ಈ ದಿಸೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದರು.
ಕೆನರಾ ಬ್ಯಾಂಕ್‌ನ ಮುಖ್ಯ ಮಹಾಪ್ರಬಂಧಕ ಕೆ.ಜೆ. ಶ್ರೀಕಾಂತ್ ಮಾತನಾಡಿ, ಕೇಂದ್ರ ಸರ್ಕಾರವು ಆರ್ಥಿಕ ಪ್ರಗತಿಗೆ ಆದ್ಯತೆ ನೀಡುತ್ತಿದ್ದು ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾತಿಯನ್ನು ಸರಳಗೊಳಿಸಲಾಗಿದೆ. ಸ್ವಯಂ ಉದ್ಯೋಗ ಮಾಡುವವರು ವ್ಯಕ್ತಿತ್ವ ವಿಕಸನದೊಂದಿಗೆ ಉತ್ತಮ ಕೌಶಲವನ್ನೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆನರಾ ಬ್ಯಾಂಕ್ ಮಂಗಳೂರು ವೃತ್ತದ ಮಹಾಪ್ರಬಂಧಕ ಸುಧಾಕರ ಕೊಠಾರಿ ಮಾತನಾಡಿ ಇಂದು ಮಹಿಳೆಯರು ಕೂಡಾ ಸ್ವಯಂ ಉದ್ಯೋಗದೊಂದಿಗೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿದರು.
ರುಡ್‌ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಸ್ವಾಗತಿಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರು.
ಮುಖ್ಯಾಂಶಗಳು
-ಪ್ರಸಕ್ತ ವರ್ಷ ೭೮೩ ತರಬೇತಿ ಕಾರ್ಯಕ್ರಮಗಳ ಮೂಲಕ ೨೨,೨೬೪ ಮಂದಿ ನಿರುದ್ಯೋಗಿಗಳಿಗೆ ಸ್ವಯಂ-ಉದ್ಯೋಗ ತರಬೇತಿ ನೀಡಲಾಗಿದೆ. ೧೯೮೨ ರಿಂದ ಈ ವರೆಗೆ ೧೮,೫೯೨ ತರಬೇತಿ ಕಾರ್ಯಕ್ರಮಗಳ ಮೂಲಕ ೫,೬೨,೮೮೦ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲಾಗಿದೆ.
-೨,೯೧೯ ಜಾಗೃತಿ ಶಿಬಿರಗಳ ಮೂಲಕ ಸ್ವಯಂ ಉದ್ಯೋಗದ ಬಗ್ಯೆ ಮಾಹಿತಿ, ಮಾರ್ಗದರ್ಶನ ನೀಡಲಾಗಿದೆ.
-ಈ ವರ್ಷ ೧೭,೦೧೧ ಮಂದಿ ಸ್ವ-ಉದ್ಯೋಗ ತರಬೇತಿ ಪಡೆದವರು ಸ್ವಯಂ ಉದ್ಯೋಗ ಪ್ರಾರಂಭಿಸಿದ್ದಾರೆ. ವಿವಿಧ ಬ್ಯಾಂಕ್‌ಗಳು ಇವರಿಗೆ ೪೨.೧೩ ಕೋಟಿ ರೂ. ಸಾಲ ನೀಡಿರುತ್ತವೆ.