ಮೊಬೈಲ್ ಅಂಗಡಿಯ ನೌಕರನಿಂದ ೨.೩೬ ಲಕ್ಷ ರೂ. ಮೌಲ್ಯದ ಫೋನ್, ನಗದು ಕಳವು; ದೂರು ದಾಖಲು
ಮಂಗಳೂರು- ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಮೊಬೈಲ್ ಅಂಗಡಿಯ ಉದ್ಯೋಗಿ ಮಹಮ್ಮದ್ ಶಿಬಾನ್ ಎಂಬುವರು ಅಂಗಡಿಯ ಡ್ರಾಯರ್‌ನಲ್ಲಿದ್ದ ೨.೩೬ ಲಕ್ಷ ರೂಪಾಯಿ ಮೌಲ್ಯದ ಏಳು ಮೊಬೈಲ್ ಫೋನ್‌ಗಳು ಮತ್ತು ೫೮,೧೦೦ ರೂಪಾಯಿ ನಗದು ಕಳವು ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಜಾನ್ವಿ ಪ್ಲಾಜಾದಲ್ಲಿರುವ ಮೊಬೈಲ್ ಅಂಗಡಿಯ ಮ್ಯಾನೇಜರ್ ಸಂದೇಶ್ ಶೆಟ್ಟಿ ಅವರು ರಜೆ ಮೇಲೆ ಹೋಗಿದ್ದರಿಂದ ಮಳಿಗೆಯ ಸಂಪೂರ್ಣ ಜವಾಬ್ದಾರಿಯನ್ನು ಮಹಮ್ಮದ್ ಶಿಬಾನ್ ಅವರಿಗೆ ವಹಿಸಿದ್ದರು. ಆದರೆ, ಶಿಬಾನ್‌ನ ದುರಾಡಳಿತದಿಂದ ಸಂದೇಶ್ ಅವರು ತಮ್ಮ ರಜೆಯನ್ನು ಮೊಟಕುಗೊಳಿಸಿ ಬೇಗನೆ ಹಿಂದಿರುಗಿದಾಗ ಅಂಗಡಿ ಮುಚ್ಚಿರುವುದು ಕಂಡು ಬಂದಿದೆ.
ಬಳಿಕ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ ಸಂದೇಶ್, ಅಂಗಡಿ ತೆರೆದು ನೋಡಿದಾಗ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬಂದಿದೆ. ಬೆಂಗಳೂರಿನ ಅಧಿಕಾರಿಗಳು ನಡೆಸಿದ ಆಡಿಟ್‌ನಲ್ಲಿ ಡ್ರಾಯರ್‌ನಲ್ಲಿ ಏಳು ಮೊಬೈಲ್ ಫೋನ್‌ಗಳು ಮತ್ತು ನಗದು ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಬಳಿಕ ಶಿಬಾನ್ ನನ್ನು ಕೇಳಿದಾಗ, ಆತ ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗಿರುವುದನ್ನು ಒಪ್ಪಿಕೊಂಡಿದ್ದಾನೆ. ಹಾಗೂ ಅವುಗಳನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾನೆ ಆದರೆ ಆತ ಮೊಬೈಗಳನ್ನು ಹಿಂತಿರುಗಿಸದ ಕಾರಣ, ಸಂದೇಶ್ ಶೆಟ್ಟಿ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.