ಮಗನನ್ನು ಏರ್ ಪೋರ್ಟಿಗೆ ಬಿಟ್ಟು ಬರುತ್ತಿದ್ದ ವೇಳೆ ಸಂಪಾಜೆಯಲ್ಲಿ ಕಾರು ಅಪಘಾತ; ಗಂಭೀರವಾಗಿ ಗಾಯಗೊಂಡಿದ್ದ ತಂದೆ ಮೃತ್ಯು
ಸುಳ್ಯ:ಮಗನನ್ನು ವಿದೇಶಕ್ಕೆ ಹೋಗಲು ಏರ್‌ಪೋರ್ಟ್‌ಗೆ ಬಿಟ್ಟು ಬರುತ್ತಿರುವ ವೇಳೆ ಸಂಪಾಜೆಯಲ್ಲಿ ಕಾರು ಪಲ್ಟಿಯಾಗಿ ತಂದೆ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಗ್ರಾಮದ ದೊಡ್ಡಡ್ಕ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ರಬ್ಬರ್ ತೋಟಕ್ಕೆ ಪಲ್ಟಿಯಾಗಿದ್ದು, ಗಂಭೀರ ಗಾಯಗೊಂಡ ಕಾರು ಚಾಲಕ ವಿರಾಜಪೇಟೆಯ ಗಣೇಶ್ (೬೪) ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ವಿರಾಜಪೇಟೆಯ ಪೆರುಂಬಾಡಿಯ ಗಣೇಶ್ ರವರು ತಮ್ಮ ಪುತ್ರ ದುಬೈಗೆ ಪ್ರಥಮ ಬಾರಿಗೆ ತೆರಳುತ್ತಿರುವ ಸಂದರ್ಭದಲ್ಲಿ ಮಂಗಳೂರಿನ ಏರ್‌ಪೋರ್ಟ್‌ಗೆ ಬಿಟ್ಟು ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ೨-೩ ಬಾರಿ ಪಲ್ಟಿಯಾಗಿದ್ದು, ಅಪಘಾತದ ಪರಿಣಾಮ ಗಣೇಶ್ ರವರ ಎದೆಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಗಣೇಶ್ ಅವರ ಮಗಳು, ಅಳಿಯ ಮತ್ತು ಇನ್ನೋರ್ವ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಗಣೇಶ್ ಅವರು ಕೊಡಗು ಖಾಸಾಗಿ ಬಸ್ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷರಾಗಿ, ವಿರಾಜಪೇಟೆ ಕರ್ನಾಟಕ ಸಂಘದ ಸದಸ್ಯರಾಗಿ ಕಾರ್‍ಯನಿರ್ವಹಿಸುತ್ತಿದ್ದರು. ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.