ಹರಿಹರ ಪಲ್ಲತ್ತಡ್ಕ: ತಡರಾತ್ರಿ ಮನೆ ಮೇಲೆ ಬಿದ್ದ ಮರಆರು ಮಂದಿಗೆ ಗಾಯ: ಮೂರು ಮನೆಗಳಿಗೆ ಹಾನಿ
ಸುಳ್ಯ:ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದ ಪಲ್ಲತ್ತಡ್ಕ ಕಾಲೋನಿಯಲ್ಲಿನ ಮನೆಯೊಂದಕ್ಕೆ ತಡರಾತ್ರಿ ಮರ ಬಿದ್ದು ಆರು ಮಂದಿ ಗಾಯಗೊಂಡಿದ್ದು ಒಂದು ಮನೆ ಸಂಪೂರ್ಣ ಹಾನಿಗೊಂಡಿದ್ದು, ಎರಡು ಮನೆಗಳಿಗೆ ಬಾಗಶಃ ಹಾನಿಯಾಗಿದೆ.
ಗಾಡ ನಿದ್ರೆಯಲ್ಲಿದ್ದ ಸಂದರ್ಭದಲ್ಲಿ ಐತೆ ಎಂಬವರ ಮನೆ ಸಮೀಪದ ಬೃಹತ್ ಮರ ಮನೆ ಮೇಲೆ ಬಿದ್ದಿದ್ದು, ಮನೆಯ ಮೇಲ್ಛಾವಣಿ, ಗೋಡೆ ಸಂಪೂರ್ಣ ಧರಾಶಾಯಿಯಾಯಿತು. ಮನೆಯೊಳಗೆ ಮಲಗಿದ್ದ ಐತೆ, ರವಿ, ಮಾಲತಿ, ಮಕ್ಕಳಾದ ಆದರ್ಶ ಮತ್ತು ಯಕ್ಷಿತಾ ಹಾಗೂ ಪಕ್ಕದ ಮನೆಯ ಚೋಮು ಎಂಬವರಿಗೆ ಗಾಯವಾಗಿದ್ದು, ಮಾಹಿತಿ ತಿಳಿದ ಸ್ಥಳೀಯರು ರಾತ್ರಿಯೇ ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಯಕ್ಷಿತಾ ಹಾಗೂ ಅದೇ ಮನೆಯ ಪಕ್ಕದ ಮನೆಯ ಚರುಂಬ ಎಂಬವರಿಗೆ ಸಣ್ಣ ಪುಟ್ಟಗಾಯವಾಗಿದೆ.
ಪಕ್ಕದಲ್ಲಿನ ಸಂಜೀವ ಎಂಬವರ ಮನೆಯ ಮೇಲೂ ಈ ವರದ ಗೆಲ್ಲುಗಳು ಬಿದ್ದಿದೆ. ತಾರಸಿ ಮನೆಯಾದ ಕಾರಣ ಮೇಲ್ಛಾವಣಿಗೆ ಹಾನಿಯಾಗಿಲ್ಲ. ಆದರೆ ಮನೆಯ ಎದುರುಗಡೆ ಸಿಟೌಟ್‌ಗೆ ಹಾಕಲಾಗಿದ್ದ ಶೀಟ್‌ಗಳು ಪುಡಿಯಾಗಿವೆ. ಸಂಜೀವ ಅವರ ಬೈಕ್ ಜಖಂಗೊಂಡಿದೆ. ಅವರ ತಾಯಿ ಚೋಮು ಅವರಿಗೆ ಗಾಯವಾಗಿದೆ. ಸಮೀಪದ ಚರುಂಬ ಎಂಬವರ ಮನೆಯ ಮೇಲೆ ಗೆಲ್ಲುಗಳು ಬಿದ್ದು ಮನೆಗೆ ಹಾನಿ ಸಂಭವಿಸಿದೆ. ಮನೆಯಲ್ಲಿ ರಾತ್ರಿ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದೆ.
ಅಧಿಕಾರಿಗಳ ಭೇಟಿ:
ಮನೆಯ ಮೇಲೆ ಮರ ಬಿದ್ದು ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಪಂಜ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ, ಗ್ರಾಮ ಆಡಳಿತಾಧಿಕಾರಿ ಭಾರತಿ ಮತ್ತಿತರರು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಮಾಹಿತಿ ಪಡೆದು. ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.