ಮುಡಾ ಶುದ್ದೀಕರಿಸಲು ಸಿಎಂಗೆ ಬಹಿರಂಗ ಪತ್ರ
ಸಂಜೆವಾಣಿ ನ್ಯೂಸ್
ಮೈಸೂರು: ಆ.24:- ಅಕ್ರಮ, ಹಗರಣಗಳ ಕೂಪವಾಗಿರುವ ಮುಡಾ ಶುದ್ದೀಕರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನೆ ಮನೆ ಮಾದೇಗೌಡ ಬಹಿರಂಗ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ಅವರೇ ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿರುವುದು ಮೈಸೂರು ಜನರ ಸುಯೋಗ. ಕಳೆದ 42 ವರ್ಷಗಳ ರಾಜಕೀಯ ಜೀವನದಲ್ಲಿ ನೀವು ಉಪ್ಪುಂಡ ಕನ್ನಡ ನಾಡಿಗೆ ಋಣಸಂದಾಯ ಮಾಡುವ ಕಾಲ ಬಂದಿದೆ. ನಿಮ್ಮ ಸುದೀರ್ಘ ಅಧಿಕಾರಾವಧಿಯಲ್ಲಿ ಕಳೆದ ಒಂದು ವರ್ಷದಿಂದ ನೀವು ಅನುಭವಿಸಿದಷ್ಟು ತಳಮಳ ಇನ್ನಾವ ಅಧಿಕಾರಾವಧಿಯಲ್ಲೂ ಅನುಭವಿಸಲಿಲ್ಲ. ಇದಕ್ಕೆ ಕಾರಣ ಮುಡಾದಲ್ಲಿ ನಿಮ್ಮ ಪತ್ನಿ ಪಡೆದ 14 ನಿವೇಶನಗಳು. ಇದು ನಿಮ್ಮ ಅಧಿಕಾರದ ಪ್ರಭಾವದಿಂದ ಪಡೆದುಕೊಂಡಿದ್ದೆಂಬ ಆರೋಪ ಕೇಳಿ ಬಂದಿದೆ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದರಿಂದ ಮುಡಾ ಸಮಸ್ಯೆ ಬಗೆಹರಿಯಲಿಲ್ಲ. ನಿವೇಶನ ಬಯಸಿ ದಶಕಗಳಿಂದ ಕಾಯುತ್ತಿರುವ 84 ಸಾವಿರ ನಿವೇಶನಾಕಾಂಕ್ಷಿಗಳಿಗೂ ಯಾವುದೇ ಪ್ರಯೋಜನವಾಗಲಿಲ್ಲ.
ನೀವೇ ಹೇಳಿದಂತೆ ಇದು ನಿಮ್ಮ ಕೊನೆ ಅಧಿಕಾರಾವಧಿ. ನಿಮ್ಮ ಕೊನೆ ಅಧಿಕಾರದಲ್ಲಾದರೂ ಜನರು ನಿಮ್ಮನ್ನು ಶಾಶ್ವತವಾಗಿ ನೆನೆಯುವ ಕೆಲಸ ಮಾಡಿ. ಬಹು ಮುಖ್ಯವಾಗಿ ನಿಮ್ಮ ಹೆಸರಿಗೆ ಕಳಂಕ ಅಂಟಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕೊಳೆ ತೊಳೆವ ಕೆಲಸ ಮಾಡಿ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿರುವ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ, ಅರ್ಹ ಫಲಾನುಭವಿಗಳು ನೆಮ್ಮದಿಯ ಸೂರು ಕಾಣುವಂತೆ ಮಾಡಿ. ಮುಖ್ಯಮಂತ್ರಿಯಾಗಿ ನಿಮಗೆ ಅಧಿಕಾರದತ್ತವಾಗಿ ಇರುವ ಪ್ರಭಾವ ಬಳಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಶುದ್ದೀಕರಿಸಿ. ಅದನ್ನು ಉಳಿಸಿ ಬೆಳೆಸುವ ಪುಣ್ಯದ ಕೆಲಸ ಮಾಡಿ. ಇಲ್ಲಿವರೆಗೆ ಮುಡಾದಲ್ಲಿ ಆಗಿರುವ ಎಲ್ಲಾ ಹಗರಣಗಳನ್ನು ತೊಡೆದು, ಉತ್ತಮ ರೀತಿಯಲ್ಲಿ ಜನಸ್ನೇಹಿಯಾಗಿ ಬೆಳೆಸುವಂಥ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತನ್ನಿ. ಈ ನಿಯಮಗಳು ಮೈಸೂರಿಗೆ ಮಾತ್ರ ಸೀಮಿತವಾಗದೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ನಾಡಿನ ಎಲ್ಲಾ ನಗರ-ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಂಡಳಿಗಳಲ್ಲು ಕಟ್ಟುನಿಟ್ಟಿನ ಕಾನೂನು ಅನ್ವಯವಾಗುವಂತೆ ಮಾಡಿ. ಅಕ್ರಮ ಭೂಕಬಳಿಕೆದಾರರ ವಿರುದ್ದ ಕಠಿಣ ಕಾನೂನು ಬಿಸಿ ಮುಟ್ಟಿಸಿ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ನಿಮ್ಮ ಕಡೆ ಅಧಿಕಾರಾವಧಿಯಲ್ಲಿ ಅಕ್ರಮ ನಿವೇಶನ ಪಡೆದ ಆರೋಪ ಬಂದಿರುವುದು ನನಗೆ ಬಹಳ ನೋವಾಗುತ್ತಿದೆ. ನಿಮ್ಮ ಪತ್ನಿ ಮೇಲೆ ಕಿಂಚಿತ್ತು ಕಾಳಜಿ ಇದ್ದಿದ್ದರೆ, ಆ 14 ಮುಡಾ ನಿವೇಶನಗಳನ್ನು ಹಿಂತಿರುಗಿಸಿ ಆರೋಪ ಮುಕ್ತರಾಗುತ್ತಿದ್ದಿರಿ. ಹೀಗಾಗಿದ್ದರೆ, ರಾಜ್ಯಪಾಲರು ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಡುವ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ. ಇದರ ವಿರುದ್ಧ ನೀವು ನ್ಯಾಯಾಲಯದ ಮೊರೆ ಹೋಗುವ ಸಂದರ್ಭವೂ ಉದ್ಭವಿಸುತ್ತಿರಲಿಲ್ಲ. ಆದರೆ, ನೀವು ಮುಡಾ ಪ್ರಕರಣವನ್ನು ಸಮರ್ಥಿಸಿಕೊಂಡು ಈಗ ಕಾನೂನಿನ ಕುಣಿಕೆಗೆ ಸಿಲುಕಿದ್ದಲ್ಲದೆ, ಏನೂ ಅರಿಯದ ಮುಗ್ದ ಪತ್ನಿ ಪಾರ್ವತಿಯನ್ನೂ ಕಾನೂನಿನ ಕಟಕಟೆಗೆ ದೂಡಿದ್ದೀರಿ. ಇದು ನಿಮ್ಮ ಆತ್ಮ ಸಾಕ್ಷಿಗಾದರೂ ಸರಿ ಅನ್ನಿಸುತ್ತದೆಯೇ?
ನಿಮ್ಮ ಪತ್ನಿಗೆ 2021ರಲ್ಲಿ 50:50 ಅನುಪಾತದಡಿ 14 ನಿವೇಶನಗಳನ್ನು ಬಿಜೆಪಿ ಅಧಿಕಾರಾವಧಿಯಲ್ಲೇ ಕೊಟ್ಟಿರಲಿ. ಹಿರಿಯ ರಾಜಕಾರಣಿಯಾದ ನಿಮ್ಮ ಗಮನಕ್ಕೆ ಬಂದಾಗ, ಇದೊಂದು ಅಕ್ರಮ ಎಂದು ಅನ್ನಿಸಲಿಲ್ಲವೇ? ಇಂಥ ಅಕ್ರಮ ನಡೆಯುತ್ತಿರುವ ಮುಡಾ ಅಧಿಕಾರಿಗಳ ವಿರುದ್ಧ ನೀವು ಬಹಿರಂಗವಾಗಿ ಗುಡುಗಿದ್ದರೆ, ನೀವು ದೊಡ್ಡ ನಾಯಕರಾಗುತ್ತಿದ್ದಿರಿ. ಅಂದೇ ಮುಡಾ ಅಕ್ರಮಗಳನ್ನೆಲ್ಲಾ ತೊಡೆದು, ಸರಿಯಾದ ಕಾನೂನು ಕ್ರಮಗಳಿಂದ ಮುಡಾ ಕೊಳೆ ತೊಳೆಯಬಹುದಿತ್ತು. ಮುಡಾ ಮತ್ತಷ್ಟು ಜನಸ್ನೇಹಿಯಾಗುತ್ತಿತ್ತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಶುದ್ಧೀಕರಣಕ್ಕಾಗಿ ಅಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ಬಯಲಿಗೆ ತರಲು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರಂಥ ದಕ್ಷ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ. ನಿಮ್ಮ ಪತ್ನಿ ಹೆಸರಿನಲ್ಲಿ ಪಡೆದುಕೊಂಡಂಥ 50:50 ಅನುಪಾತದಲ್ಲಿ ಮುಡಾ ನಿವೇಶನಗಳನ್ನು ಅವ್ಯಾಹತವಾಗಿ ಕಬಳಿಸಲಾಗಿದೆ. ಇದನ್ನೆಲ್ಲ ಮರಳಿ ಪಡೆದು, ಸುಮಾರು ನಾಲ್ಕಾರು ದಶಕಗಳಿಂದ ಮುಡಾ ನಿವೇಶನ ಬಯಸಿ ಅರ್ಜಿ ಸಲ್ಲಿಸಿರುವ 84 ಸಾವಿರಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿ. ಸ್ವಂತ ಮನೆ ಇಲ್ಲದೆ, ಬಾಡಿಗೆ ಮನೆಯಲ್ಲೇ ದಿನ ದೂಡುತ್ತಿರುವ ಬಡ ಜನರ ನೆತ್ತಿಗೊಂದು ಸೂರು ನೀಡುವ ಉತ್ತಮ ವಾತಾವರಣ ರೂಪಿಸಿ. ಇದಕ್ಕಾಗಿ ಅರ್ಹ ಫಲಾನುಭವಿಗಳಿಗಷ್ಟೆ ಮುಡಾ ನಿವೇಶನಗಳು ದೊರೆಯುವಂಥ ಕಟ್ಟುನಿಟ್ಟಿನ ಕಾನೂನು ಮಾಡಿ ಎಂದು ಆಗ್ರಹಿಸಿದ್ದಾರೆ.
ನಿಮ್ಮ 42 ವರ್ಷಗಳ ರಾಜಕೀಯ ಜೀವನದಲ್ಲಿ ನೀವು ಅನುಭವಿಸಿದ ಅಧಿಕಾರ ಸುಖದ ಋಣ ತೀರಿಸಬೇಕು ಎಂಬ ಅಂತಿಮ ಇಚ್ಛೆ ನಿಮಗಿದ್ದರೆ, ನಿಮಗೆ ಸಿಕ್ಕಿರುವ ಅದೃಷ್ಟವೋ-ದೈವದತ್ತ ಕೊಡುಗೆಯೋ ಆದ ಮುಖ್ಯಮಂತ್ರಿ ಅಧಿಕಾರವನ್ನು ದಿಟ್ಟವಾಗಿ ಬಳಸಿ. ನಿಮ್ಮ ಪರಮೋಚ್ಛ ಅಧಿಕಾರದಿಂದ ಭೂಗಳ್ಳರ ವಿರುದ್ಧ ಕಠಿಣ ಕಾನೂನು ಜಾರಿಗೆ ತಂದು, ಬಡ ಜನರು ನೆಮ್ಮದಿಯ ಸೂರು ಕಟ್ಟಿಕೊಳ್ಳಲು ನೆರವಾಗಿ ಎಂದು ಆಗ್ರಹಿಸಿದ್ದಾರೆ.