ರಾಷ್ಟ್ರಪತಿಗಳ ಮುಂದೆ ಶಾಸಕರ ಪರೇಡ್‍ಗೆ ಚರ್ಚೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.24:- ರಾಜ್ಯಪಾಲರ ಪ್ರಾಸಿಕ್ಯೂಷನ್ ತೀರ್ಮಾನ ಸಂವಿಧಾನಕ್ಕೆ ವಿರುದ್ಧವಾಗಿದೆ. ಹೀಗಾಗಿ ನ್ಯಾಯಾಲದ ಮೊರೆ ಹೋಗಿದ್ದು, ರಾಷ್ಟ್ರಪತಿಗಳ ಮುಂದೆ ಶಾಸಕರ ಪರೇಡ್ ನಡೆಸಲೂ ಚರ್ಚಿಸಲಾಗಿದೆ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್‍ಸೇಠ್ ತಿಳಿಸಿದರು.
ಶುಕ್ರವಾರ ಆನೆಗಳನ್ನು ಅರಮನೆಗೆ ಸ್ವಾಗತಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಕ್ಷನ್ 17ಎ ಅಡಿಯಲ್ಲಿ ತನಿಖಾ ಸಂಸ್ಥೆಗಳಿಂದ ಅನುಮತಿ ಕೇಳಿದರೆ ರಾಜ್ಯಪಾಲರು ಅನುಮತಿ ನೀಡಬೇಕು. ಆದರೆ, ತನಿಖಾ ವರದಿಯೇ ಇಲ್ಲದೆ ಕೇವಲ ಖಾಸಗಿ ದೂರು ಆಧರಿಸಿ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದಾರೆ.
ಈಗಾಗಲೇ ಹತ್ತಾರು ಪ್ರಕರಣಗಳಲ್ಲಿ ಲೋಕಾಯುಕ್ತ, ಎಸ್‍ಐಟಿ ತನಿಖಾ ವರದಿ ನೀಡಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿಲ್ಲ. ಸಿದ್ದರಾಮಯ್ಯ ಪ್ರಕರಣದಲ್ಲಿ ಯಾವುದೇ ಪುರಾವೆ, ದಾಖಲೆ ಇಲ್ಲದಿದ್ದರು, ಸಿಎಂ ಹಸ್ತಕ್ಷೇಪ ಮಾಡಿಲ್ಲದಿದ್ದರೂ ತನಿಖೆಗೆ ಅನುಮತಿ ನೀಡಿರುವುದು ಎಷ್ಟು ಸರಿ. ಇದನ್ನು ರಾಷ್ಟ್ರಪತಿಗಳ ಗಮನಕ್ಕೆ ತೆಗೆದುಕೊಂಡು ಹೋಗಲು ಚರ್ಚಿಸಲಾಗಿದೆ. ಸಂವಿಧಾನಕ್ಕೆ ಧಕ್ಕೆಯಾಗಿರುವುದಿಂದ ಅವರ ಗಮನಕ್ಕೆ ತೆಗೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಸಿಎಂ ದೆಹಲಿಯಿಂದ ಬಂದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಿಎಂ ಪತ್ನಿ ಕೊಟ್ಟಿರುವ ಪತ್ರದಲ್ಲಿ ವೈಟ್ನರ್ ಹಾಕಿದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಪತ್ರದಲ್ಲಿ ಹೇಳಬೇಕಾಗಿರುವುದನ್ನು ಸರಿಯಾಗಿ ಹೇಳಿದ್ದಾರೆ. ಅದರಲ್ಲಿ ಯಾವ ತಪ್ಪೂ ಇಲ್ಲ. ಸಮಾನಾಂತರ ಬಡಾವಣೆಯಲ್ಲಿ ನಿವೇಶನ ಕೇಳಿದ್ದಾರೆ. ಬರೆಯುವಾಗ ಏನೋ ತಪ್ಪಾಗಿದೆ. ಅದಕ್ಕಾಗಿ ವೈಟ್ನರ್ ಹಾಕಿರಬಹುದು. ತನಿಖೆಯಲ್ಲಿ ಯಾರು ವೈಟ್ನರ್ ಹಾಕಿದ್ದು ಎಂದು ಗೊತ್ತಾಗುತ್ತದೆ. ಎಂದು ಹೇಳಿದರು.
ನಾನು ಶಾಸಕನಾಗಿ ಮುಡಾದ ಎಲ್ಲಾ ಸಭೆಗಳಲ್ಲಿ ಭಾಗಿಯಾಗಿದ್ದೇನೆ. ನಾನು ಭಾಗವಹಿಸಿದ್ದ ಸಭೆಯಲ್ಲಿ ನಿವೇಶನ ನೀಡಲು ಅನುಮತಿ ದೊರೆತಿಲ್ಲ. ಅಲ್ಲದೆ ಯಾವ ಲೋಪವೂ ಆಗಿಲ್ಲ. ನಂತರದ ಸಭೆಗಳಲ್ಲಿ ಅನುಮೋದನೆ ದೊರೆತಿರಬಹುದು. ಈ ಕುರಿತು ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಒಂದೊಂದು ರೀತಿಯ ವಿಶ್ಲೇಷಣೆ ಸರಿಯಲ್ಲ ಎಂದರು.