ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿ  ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಕೊನೆಗೂ  ಮುಹೂರ್ತ ಫಿಕ್ಸ್


ರಾಮಚಂದ್ರ ಪೂಜಾರ್
ಸಂಜೆವಾಣಿ ವಾರ್ತೆ
ಮರಿಯಮ್ಮನಹಳ್ಳಿ, ಆ. 24: ಮರಿಯಮ್ಮನಹಳ್ಳಿಯ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಮುಹೂರ್ತಕ್ಕೆ ಕೊನೆಗೂ ಕಾಲ ಕೂಡಿಬಂದಿದ್ದು, ಆ. 30 ಕ್ಕೆ ಫಿಕ್ಸ್ ಆಗಿದೆ.
ಪಟ್ಟಣ ಪಂಚಾಯತಿಯ 18 ಸದಸ್ಯರುಗಳ ಆಯ್ಕೆ ಪ್ರಕ್ರಿಯೆ ನಡೆದು 32 ತಿಂಗಳುಗಳು ಅಂದರೆ 2  ವರ್ಷ 8 ತಿಂಗಳುಗಳೇ ಕಳೆದವು. ಆದರೆ ಇದೂವರೆಗೂ ಪ.ಪಂ.ನ ಆಡಳಿತ ಚುಕ್ಕಾಣಿಗೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಕಾಲ ಕೂಡಿ ಬಂದಿರಲಿಲ್ಲ.
ಕೊನೆಗೂ 2 ವರ್ಷ 8 ತಿಂಗಳ ನಂತರ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಅಧಿಕಾರಿ ಹೊಸಪೇಟೆಯ ತಹಶೀಲ್ದಾ‌ರ್ ಶೃತಿಯವರು ಆದೇಶ ಹೊರಡಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯವರ್ಗ, ಉಪಾಧ್ಯಕ್ಷ ಸ್ಥಾನವನ್ನು ಎಸ್ಪಿ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
2021ರ ಡಿಸೆಂಬರ್ 30ರಂದು ನಡೆದ ಮರಿಯಮ್ಮನಹಳ್ಳಿಯ ಪ.ಪಂ.ಸದಸ್ಯರ ಆಯ್ಕೆಯ ಚುನಾವಣೆಯಲ್ಲಿ ವಿಜೇತ 18 ಸದಸ್ಯರಲ್ಲಿ 13 ಸದಸ್ಯರು ಕಾಂಗ್ರೆಸ್‌ನವರಾಗಿದ್ದು, 04 ಬಿಜೆಪಿ ಹಾಗೂ 01 ಪಕ್ಷೇತರ ಅಭ್ಯರ್ಥಿಯಾಗಿದ್ದರು. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಆಡಳಿತ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಆದರೂ ಫಲಿತಾಂಶವನ್ನು ನಿರೀಕ್ಷಿಸಬೇಕಿದೆ.
ಬಹುದಿನದ ಬಳಿಕ ಮೀಸಲಾತಿ ಪ್ರಕಟಗೊಂಡಿದ್ದರಿಂದ ನೂತನ ಆಡಳಿತ ರಚಿಸಲು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ  ಆಕಾಂಕ್ಷಿಗಳು ಹೆಚ್ಚಾಗಿದ್ದು,  ತೆರೆಮರೆಯ ಕಾರ್ಯ ಆರಂಭಿಸಿದ್ದಾರೆ. ಅಧ್ಯಕ್ಷ ಗಾದೆ ಯಾರಿಗೆ ಒಲಿಯಲಿದೆ ಎನ್ನುವುದನ್ನು ಆ. 30ರ ವರೆಗೆ ಕಾದು ನೋಡಬೇಕಿದೆ.