ಜನಸಂಪರ್ಕ ಸಭೆ: ಮಾಹಿತಿ ನೀಡದ ಅಧಿಕಾರಿಗಳಿಗೆ ರೈತರ ತರಾಟೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.24: ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಪಂಪ್ ಸೆಟ್ ಆಧಾರಿತ ಕೃಷಿಕರು ನಮ್ಮ ತಾಲೂಕಿನಲ್ಲಿದ್ದಾರೆ. ಆದಕಾರಣ ಹೊಸ ಲೈನ್‍ಮೆನ್ ನೇಮಕಾತಿಯ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಲೈನ್ ಮೆನ್ ಗಳನ್ನು ಕೆ.ಆರ್.ಪೇಟೆ ತಾಲೂಕಿಗೆ ನೇಮಕ ಮಾಡಿಕೊಡುವಂತೆ ತಾಲೂಕು ರೈತಸಂಘದ ಕಾರ್ಯಕರ್ತರು ಸೆಸ್ಕಾಂ ಅಧಿಕಾರಿಗಳನ್ನು ಆಗ್ರಹಿಸಿದರು.
ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಛೇರಿಯ ಆವರಣದಲ್ಲಿ ಸೆಸ್ಕಾಂ ಅಧೀಕ್ಷಕ ಎಂಜಿನಿಯರ್ ಬಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸೆಸ್ಕಾಂ ಉಪ ವಿಭಾಗ 01 ಮತ್ತು 02 ರ ಜನಸಂಪರ್ಕ ಸಭೆಯಲ್ಲಿ ರೈತರು ತಾಲೂಕಿಗೆ ಹೆಚ್ಚು ಲೈನ್ ಮೆನ್ ಗಳನ್ನು ನೇಮಕ ಮಾಡುವಂತೆ ಆಗ್ರಹಿಸಿದರು.
ಜನಸಂಪರ್ಕ ಸಭೆಯ ಮಾಹಿತಿಯನ್ನು ವಿದ್ಯುತ್ ಇಲಾಖೆ ರೈತರಿಗೆ ನೀಡುತ್ತಿಲ್ಲ. ಸಭೆ ಆಯೋಜಿಸುತ್ತಿರುವ ಬಗ್ಗೆ ಪತ್ರಿಕೆಗಳ ಮೂಲಕ ಮಾಹಿತಿ ಬಹಿರಂಗಪಡಿಸುತ್ತಿಲ್ಲ ಪತ್ರಕರ್ತರಿಗೆ ಯಾವುದೇ ಮಾಹಿತಿ ನೀಡದೆ ಗೌಪ್ಯವಾಗಿ ಸಭೆ ಆಯೋಜಿಸಿದರೆ ಏನು ಪ್ರಯೋಜನ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಆಯೋಜಿಸುವ ಜನಸಂಪರ್ಕ ಸಭೆಯ ಮಾಹಿತಿಯನ್ನು ರೈತರಿಗೆ ನೀಡದಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ಜನಸಂಪರ್ಕ ಸಭೆಗಳನ್ನು ನಡೆಸಬೇಕು ಎಂದು ಸಭೆಯ ಆರಂಭದಲ್ಲಿಯೇ ಸೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಜನಸಂಪರ್ಕ ಸಭೆ ನಡೆಯುವ ಮಾಹಿತಿ ಕರಪತ್ರಗಳನ್ನು ಪ್ರತಿ ಗ್ರಾಮ ಪಂಚಾಯತಿ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರಿಗೆ ತಿಳಿಸುವ ಕೆಲಸ ಮಾಡಬೇಕು ಮತ್ತು ಜನಸಂಪರ್ಕ ಸಭೆಗಳಿಗೆ ಪತ್ರಕರ್ತರನ್ನು ಆಹ್ವಾನಿಸುವಂತೆ ಒತ್ತಾಯಿಸಿದರು.
ಹಗಲು ನಿರಂತರ 07 ಘಂಟೆಗಳ ಕಾಲ ರೈತರಿಗೆ ಸಮಪರ್ಕಕ ವಿದ್ಯುತ್ ಪೂರೈಕೆ ಮಾಡುವಂತೆ ಸರ್ಕಾರದ ನಿರ್ದೇಶನವಿದ್ದರೂ ತಾಲೂಕಿನಲ್ಲಿ ವಿದ್ಯುತ್ ಇಲಾಖೆ ನಿಯಮಾನುಸಾರ ರೈತರಿಗೆ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ರಿಪೇರಿ ಹೆಸರಿನಲ್ಲಿ ಅನಿರ್ಧಿಷ್ಠ ಕಾಲ ವಿದ್ಯುತ್ ತೆಗೆದು ತೊಂದರೆ ನೀಡಲಾಗುತ್ತಿದೆ. ಎಲ್.ಸಿ.ತೆಗೆದುಕೊಳ್ಳುವುದು ಅಧಿಕಾರಿಗಳ ಏಕಸ್ವಾಮ್ಯಕ್ಕೆ ಒಳಪಟ್ಟಿದೆ. ತಾಲೂಕಿನ ಬಹುತೇಕ ಕಡೆ ಹಳೆಯ ವಿದ್ಯುತ್ ಲೈನುಗಳು ಜೋತು ಬಿದ್ದು ಅಪಾಯಕ್ಕೆ ಕಾರಣವಾಗಿದೆ. ತುಂಡಾದ ವಿದ್ಯುತ್ ತಂತಿ ತುಳಿದು ತಾಲೂಕಿನಲ್ಲಿ ಈಗಾಗಲೇ ಹಲವಾರು ರೈತರು ಮತ್ತು ಅವರ ಜಾನುವಾರುಗಳು ಸಾವನಪ್ಪಿವೆ. ಸತ್ತವರಿಗೆ ಪರಿಹಾರ ನೀಡುವ ಬದಲು ಪ್ರತಿಯೊಂದು ಜೀವವೂ ಅಮೂಲ್ಯ ಎನ್ನುವ ಭಾವನೆಯನ್ನು ಮೊದಲು ರೂಢಿಸಿಕೊಳ್ಳಿ. ಬೆಳಕು ಗ್ರಾಮ ಯೋಜನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ವಗ್ರಾಮ ಬೂಕನಕೆರೆಯಲ್ಲಿ 40 ಲಕ್ಷ ರೂಗಳ ಕಾಮಗಾರಿ ಮಾಡಲಾಗಿದೆ. ಬೆಳಕು ಗ್ರಾಮ ಯೋಜನೆಯಡಿ 09 ಮೀಟರ್ ಎತ್ತರಕ್ಕೆ ಅಳವಡಿಸಬೇಕಾದ ವಿದ್ಯುತ್ ಕಂಬಗಳನ್ನು 07 ಮೀಟರ್ ಎತ್ತರಕ್ಕೆ ಅಳವಡಿಸಲಾಗಿದೆ. ಇದರಿಂದ ಕೃಷಿ ಸರಂಜಾಮು ಸಾಗಿಸುವ ವಾಹನಗಳು ವಿದ್ಯುತ್ ತಂತಿಗೆ ತಗುಲಿ ಅಪಾಯ ಕಾಣಿಸಿಕೊಂಡಿದೆ. ಕೆಲವು ಕಡೆ ರಸ್ತೆ ಪಕ್ಕದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸುವ ಬದಲು ರೈತರ ಜಮೀನುಗಳಲ್ಲಿ ಅಳವಡಿಸಿ ರೈತರಿಗೆ ಕಿರುಕುಳ ನೀಡಲಾಗಿದೆ. ಇವೆಲ್ಲವುಗಳನ್ನು ಸರಿಪಡಿಸಿ ವಿದ್ಯುತ್ ಇಲಾಖೆಯನ್ನು ರೈತ ಸ್ನೇಹಿಯನ್ನಾಗಿಸುವಂತೆ ಸಭೆಯಲ್ಲಿ ರೈತರು ಆಗ್ರಹಿಸಿದರು.
ರೈತರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಅಧೀಕ್ಷಕ ಎಂಜಿನಿಯರ್ ಬಿ.ಸೋಮಶೇಖರ್ ತಾಲೂಕಿನಲ್ಲಿ 12 ವಿದ್ಯುತ್ ವಿತರಣಾ ಉಪ ಕೇಂದ್ರಗಳಿದ್ದು ಇವುಗಳ ಮೇಲೆ ಹೆಚ್ಚಿನ ಒತ್ತಡವಿದೆ. ಇದರಿಂದಾಗಿ ಆಗಾಗ್ಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ತಾಲೂಕಿನ ಬೀರವಳ್ಳಿ ಸೇರಿದಂತೆ ಮೂರು ಕಡೆ ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣ ಪ್ರಗತಿಯಲ್ಲಿದ್ದು ಅನಂತರ ವಿದ್ಯುತ್ ಪೂರೈಕೆ ಜಾಲದ ಮೇಲಿನ ಒತ್ತಡ ಕಡಿಮೆಯಾಗಲಿದೆ. ರೈತರ ಹಿದೃಷ್ಠಿಯಿಂದ ವಿದ್ಯುತ್ ಫೀಡರ್ ಸಭಲೀಕರಣ ಯೋಜನೆಗೆ ಇಲಾಖೆ ಆದ್ಯತೆ ನೀಡಿದ್ದು ಸೋಲಾರ್ ವಿದ್ಯುತ್ ಉತ್ಪಾದನೆಗೆ ಹೆಚ್ಚು ಗಮನ ಹರಿಸಿದೆ. ಸರ್ಕಾರಿ ಜಮೀನು ಇರುವ ಕಡೆ ಭೂಮಿ ಪಡೆದು ಅಲ್ಲಿ ಸೋಲಾರ್ ವಿದ್ಯುತ್ ಘಟಕಗಳ ಸ್ಥಾಪನೆಗೆ ಇಲಾಖೆ ಕಾರ್ಯಯೋಜನೆ ಮಾಡಿಕೊಂಡಿದೆ. ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕನಿಷ್ಠ 05 ಎಕರೆ ಜಾಗದ ಅವಶ್ಯಕತೆಯಿಂದ ಸರ್ಕಾರಿ ಭೂಮಿ ಲಭ್ಯತೆಯಿಲ್ಲದ ಕಡೆ ಖಾಸಗಿಯವರಿಂದ ಭೂಮಿಯನ್ನು ಲೀಸ್ ಗೆ ಪಡೆಯಲು ಸಿದ್ದರಿದ್ದೇವೆಂದರು. ಅನಗತ್ಯವಾಗಿ ವಿದ್ಯುತ್ ತೆಗೆದು ರೈತರಿಗೆ ತೊಂದರೆ ನೀಡುವುದಿಲ್ಲ. ಸಮಸ್ಯೆ ಇರುವ ಕಡೆ ರಿಪೇರಿಗಾಗಿ ಕೆಲವು ಸಮಯ ಲೈನ್ ತೆಗೆದಿರಬಹುದು. ಸಮಸ್ಯೆಯಿಲ್ಲದ ಫೀಡರ್ ಗಳ ಮೂಲಕ ರೈತರಿಗೆ ಹಗಲು ನಿರಂತರ 07 ಘಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವುದಾಗಿ ಸೋಮಶೇಖರ್ ಭರವಸೆ ನೀಡಿದರು.
ಅತಿಕ್ರಮಿತ ಭೂಮಿ ಇಲಾಖೆಗೆ ಪಡೆಯಿರಿ:- ತಾಲೂಕಿನ ತೇಗನಹಳ್ಳಿ ಎಲ್ಲೆಯ ಸರ್ವೆ ನಂ.77 ರಲ್ಲಿ ಖಾಸಗಿ ವ್ಯಕ್ತಿಯೊಬ್ಬ ಸುಮಾರು 42 ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ತನ್ನ ವಶದಲ್ಲಿಟ್ಟುಕೊಂಡಿದ್ದಾನೆ. ಸದರಿ ಸರ್ಕಾರಿ ಭೂಮಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಇಲಾಖಾ ವಶಕ್ಕೆ ಪಡೆದು ಅಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಆರಂಭಿಸುವಂತೆ ರೈತರು ಸಭೆಯಲ್ಲಿ ಒತ್ತಾಯಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಕರೋಟಿ ತಮ್ಮಯ್ಯ, ನಗರೂರು ಕುಮಾರ್, ಹಿರೀಕಳಲೆ ಬಸವರಾಜು, ಚೌಡೇನಹಳ್ಳಿ ಕೃಷ್ಣೇಗೌಡ, ಸಿಂಧುಘಟ್ಟ ಮುದ್ದುಕುಮಾರ್, ನೀತಿಮಂಗಲ ಮಹೇಶ್ ಸೇರಿದಂತೆ ನೂರಾರು ರೈತರು ಬಾಗವಹಿಸಿದ್ದರು.
ಸೆಸ್ಕಾಂ ಕಾರ್ಯಪಾಲಕ ಅಭಿಯಂತರೆ ವಿನುತ, ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರತಾಪ, ಕಿರಿಯ ಎಂಜಿನಿಯರುಗಳಾದ ಹರೀಶ್, ಶ್ರೀಕಾಂತ, ಚಂದ್ರಶೇಖರ್, ಶಿವಶಂಕಮೂರ್ತಿ, ಸುನೀಲ್, ಶುಭಾಂಕ್, ರಘು, ರಾಜೇಗೌಡ, ಕೊಣ್ನೂರು, ರವೀಂದ್ರಕುಮಾರ್, ಆಡಳಿತಾಧಿಕಾರಿ ಶಿವಕುಮಾರ್ ಮತ್ತಿತತರಿದ್ದು ರೈತರಿಗೆ ಮಾಹಿತಿ ನೀಡಿದರು.