ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ
ಸಂಜೆವಾಣಿ ವಾರ್ತೆ
ಕೆ ಆರ್ ನಗರ, ಆ.24:– ಶ್ರೀಕೃಷ್ಣ ದೇವಸ್ಥಾನದಲ್ಲಿ ಮೂರು ದಿನಗಳಿಂದ ನಡೆದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಗುರುವಾರ ಉತ್ತರಾರಾಧನೆಯ ದಿನ ರಾತ್ರಿ ಮಹಾ ಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು.
ಪಟ್ಟಣದ ಚಂದ್ರ ಮೌಳೇಶ್ವರ ರಸ್ತೆಯಲ್ಲಿರುವ ಶ್ರೀ ರಾಯರ ಆರಾಧನೆ ಪ್ರಯುಕ್ತ ಶ್ರೀ ಕೃಷ್ಣ ಮಂದಿರವನ್ನು ವಿವಿಧ ಪುಷ್ಪಗಳಿಂದ ಆಕರ್ಷಿತವಾಗಿ ಅಲಂಕಾರಗೊಳಿಸಿ. ಮೂರು ದಿನಗಳ ಕಾಲ ನಡೆದ ವಿಶೇಷ ಪೂಜಾ ಕೈಂಕರ್ಯ ಗಳನ್ನು ಮೈಸೂರಿನ ಮುಖ್ಯ ಅರ್ಚಕರಾದ ರಾಘವೇಂದ್ರ ಭಟ್ ರವರು ನೆರವೇರಿಸಿದರು.
ಜೊತೆಗೆ ಅರ್ಚಕರಾದ ತ್ರಿ ವಿಕ್ರಮಾಚಾರ್ ಮತ್ತು ಜೋಗಿತ್ತಾಯರವರು ಸಾಥ್ ನೀಡಿದರು. ಭಕ್ತ ಜನ ಮೂರು ದಿನವು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀರಾಯರಲ್ಲಿ ಇಷ್ಟಾರ್ಥ ಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರು. ವಿವಿಧ ಸೇವೆಗಳನ್ನು ನಡೆಸುವುದರೊಂದಿಗೆ ತೀರ್ಥ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಮಧ್ಯಾರಾಧನೆಯಂದು ಬೆಳಿಗ್ಗೆ ಶ್ರೀ ರಾಯರ ಉತ್ಸವ ಮೂರ್ತಿಯನ್ನು ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಇಟ್ಟು ಊರಿನ ರಾಜ ಮಾರ್ಗಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಆರಾಧನೆ ಪ್ರಯುಕ್ತ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಧ್ಯಕ್ಷ ಡಾಕ್ಟರ್ ಮೋಹನ್ ದಾಸ್ ಭಟ್, ಅಧ್ಯಕ್ಷ ಕೃಷ್ಣಚಲ್ಲ, ಕಾರ್ಯದರ್ಶಿ ಚೈತನ್ಯ, ಖಜಾಂಚಿ ಎಲ್‍ಐಸಿ ಕೃಷ್ಣಮೂರ್ತಿ, ಡಾ ಗೋವರ್ಧನಾಚಾರ್, ಮೋಹನ ರಾವ್, ಡಾ ಜನಾರ್ಧನ ಭಟ್, ಕೆ.ನಾಗೇಶ್, ನರಸಿಂಹ ಸೋಮಯಾಜಿ, ನಿವೃತ್ತ ಪ್ರಾಂಶುಪಾಲರಾದ ಯು.ಎ.ನಾಗರಾಜ್, ಮ್ಯಾನೇಜರ್ ಕೃಷ್ಣ ಭಟ್, ವಾದಿರಾಜ ಪುರಾಣಿಕ್, ಮಾಧವ ವೈಲಾಯ, ಸೀತಾರಾಮ್, ರಿಷಿಕೇಶ್, ಸದಾನಂದ್, ಕೃಷ್ಣಮೂರ್ತಿ, ಕೇಶವ, ರಮೇಶ್, ಆಟೋ ಶಂಕರ್, ಆನಂದ್ ಸೋಮಯಾಜಿ, ವರುಣ್ ಸೋಮಯಾಜಿ, ಪ್ರಣಿತ್, ಶ್ರೀ ರಾಘವೇಂದ್ರ ಪ್ರಸಾದ್, ವಾದಿ, ಮಹಿಳಾ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದರು.