ಕೆರೆಹಳ್ಳಿ ಸಹಕಾರ ಸಂಘದ ಹಣವನ್ನು ಜಮಾ ಮಾಡದಿದ್ದರೆ ಎಂಡಿಸಿಸಿ ಬ್ಯಾಂಕ್‍ಗೆ ಮುತ್ತಿಗೆ-ಕೆರೆಹಳ್ಳಿ ನವೀನ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.24- ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‍ನಲ್ಲಿ ನಡೆದಿರುವ ಹಗರಣದಲ್ಲಿ ಕೆರೆಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ರೈತರಿಗೆ ನೀಡಬೇಕಾಗಿರುವ 32 ಲಕ್ಷ ರೂ.ಗಳು ಬಾಕಿ ಇದ್ದು, ಈ ಹಣವನ್ನು ಆ. 26 ರ ಗಡುವಿನೊಳಗೆ ಜಮಾ ಮಾಡದಿದ್ದರೆ ಬ್ಯಾಂಕಿನ ಮುಂದೆ ಧರಣಿ ನಡೆಸಲು ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಾಲೂಕಿನ ಕೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಭೆ ಸಂಘದ ಅಧ್ಯಕ್ಷ ಕೆರೆಹಳ್ಳಿ ನವೀನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಬ್ಯಾಂಕಿನ ಮೇಲ್ವಿಚಾರಕ ಮಂಜು ವಿರುದ್ದ ಸಂಘದ ಸದಸ್ಯರು ಹಾಗೂ ಆಡಳಿತ ಮಂಡಲಿ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ನಮ್ಮ ಸಹಕಾರ ಸಂಘದ ರೈತರಿಗೆ ಬರಬೇಕಾಗಿರುವ ಹಣ ದುರಪಯೋಗವಾಗಲು ಎಂಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರಣರಾಗಿದ್ಧಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕಿನ ಎಂಡಿ ವಿನಯ್‍ಕುಮಾರ್ 64ರ ತನಿಖೆ ನೆಪದಲ್ಲಿ ಕಳೆದ ಎಂಟು ತಿಂಗಳಿಂದ ಸಂಘದ ಠೇವಣಿ ಹಣ 5 ಲಕ್ಷ ರೂ. ಹಾಗೂ ರೈತರ ಸಾಲ ಖಾತೆಗೆ ಜಮಾವಾಗಬೇಕಾಗಿರುವ 27 ಲಕ್ಷ ರೂ.ಗಳನ್ನು ನೀಡದೆ ತೊಂದರೆ ನೀಡುತ್ತಿದ್ದಾರೆ. ಈ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದ ಅಲ್ಲಿನ ನೌಕರ ವಾಪಸ್ ಹಣವನ್ನು ಬ್ಯಾಂಕ್‍ಗೆ ಪಾವತಿ ಮಾಡಿದ್ದಾರೆ. ಆದರೂ ಸಹ ಇನ್ನು ಸಂಘಕ್ಕೆ ಬರಬೇಕಾಗಿರುವ ಹಣವನ್ನು ಜಮಾ ಮಾಡಿಲ್ಲ ಎಂದು ಸಭೆಗೆ ಸಂಘದ ಅಧ್ಯಕ್ಷ ನವೀನ್, ಸಿಇಓ ರಾಜೇಂದ್ರಕುಮಾರ್ ಮಾಹಿತಿ ನೀಡಿದರು.
ಬ್ಯಾಂಕಿನ ಮೇಲ್ವಿಚಾರಕರ ಮಂಜು ಅವರು ನೇರವಾಗಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ವಿನಯ್‍ಕುಮಾರ್ ಅವರಿಗೆ ಮೊಬೈಲ್ ಕರೆ ಮಾಡಿ ಸರ್ವ ಸದಸ್ಯರ ತೀರ್ಮಾನವನ್ನು ತಿಳಿಸಿದರು. ಇದಕ್ಕೆ ಒಪ್ಪಿದ ಅವರು ಆ. 26 ರೊಳಗೆ ಕೆರೆಹಳ್ಳಿ ಸಹಕಾರ ಸಂಘದ ಹಣವನ್ನು ಖಾತೆಗೆ ಜಮಾ ಮಾಡಲು ಒಪ್ಪಿದರು. ಬಳಿಕ ಸಭೆ ಮುಂದುವರಿಯಿತು.
ಸಂಘಕ್ಕೆ 2.70 ಲಕ್ಷ ರೂ. ನಿವ್ವಳ ಲಾಭ : ಸಂಘದ ಅಧ್ಯಕ್ಷ ಕೆರೆಹಳ್ಳಿ ನವೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘ ಉತ್ತಮವಾಗಿ ವಹಿವಾಟು ನಡೆಸಿ, 2023-24ನೇ ಸಾಲಿನಲ್ಲಿ 2.70 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘದಿಂದ 540 ಮಂದಿ ರೈತರಿಗೆ 8.71 ಕೋಟಿ ರೂ.ಗಳ ಸಾಲ ನೀಡಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದುಕೊಂಡ ರೈತರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ, ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಸಂಘವನ್ನು ಮಾದರಿ ಯಾಗಿ ಪರಿವರ್ತನೆ ಮಾಡಲು ಎಲ್ಲರು ಸಹಕಾರ ಬೇಕು. ಸಂಘವು ಸ್ವಂತ ಕಟ್ಟಡವನ್ನು ಹೊಂದಿ, ಕಂಪ್ಯೂಟರ್ ಅಳವಡಿಸಿಕೊಂಡಿದೆ ಎಂದರು.ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಜೇಂದ್ರ ಕುಮಾರ್ ಸಂಘದ ಅಡಿಟ್ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಂ. ಪುಟ್ಟಸಿದ್ದಯ್ಯ, ನಿರ್ದೇಶಕರಾದ ಬಿ.ಎಸ್. ರೇವಣ್ಣ, ಎಂ.ವಿ. ನಾಗರಾಜು, ರಾಜಕುಮಾರ್, ಕೆಂಪರಾಜು, ಮಹದೇವಸ್ವಾಮಿ, ಬೀರೇಗೌಡ, ಲತಾ, ಗುರುಸಿದ್ದನಾಯಕ, ಬ್ಯಾಂಕಿನ ಮೇಲ್ವಿಚಾರಕ ಟಿ. ಮಂಜು ಹಾಗೂ ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು.