ಸುಧಾಕರ್ ಮನವಿಗೆ ಸ್ಪಂದಿಸಿದ ಸಚಿವ ಎಂ.ಬಿ.ಪಾಟೀಲ್
ಚಿಕ್ಕಬಳ್ಳಾಪುರ, ಆ.೨೪- ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆ.ಐ.ಎ.ಡಿ.ಬಿ ಮಾಡುತ್ತಿರುವ ೫೦೦ ಎಕರೆ ಭೂ ಸ್ವಾಧೀನವನ್ನು ತಡೆ ಹಿಡಿಯಬೇಕೆಂದು ಕೋರಿ ಸಂಸದ ಡಾ.ಕೆ.ಸುಧಾಕರ್ ಮಾಡಿದ್ದ ಮನವಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಸ್ಪಂದಿಸಿದ್ದಾರೆ ಎಂದು ಸಂಸದ ಡಾ. ಕೆ ಸುಧಾಕರ್ ತಿಳಿಸಿರುತ್ತಾರೆ.
ಈ ವಿಷಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನೆಲಮಂಗಲ ತಾಲೂಕು, ಸೋಂಪುರ ಹೋಬಳಿ, ಹನುಮಂತಪುರ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಕೋಡಿಪಾಳ್ಯ ಮತ್ತು ಬಿದಲೂರು ಗ್ರಾಮದ ೫೦೦ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೆ.ಐ.ಎ.ಡಿ.ಬಿ. ರೈತರಿಗೆ ನೋಟಿಸ್ ನೀಡಿತ್ತು.
ಈ ಸಮಸ್ಯೆಯನ್ನು ಸಂಸದ ಡಾ.ಕೆ.ಸುಧಾಕರ್ ಸಚಿವರ ಗಮನಕ್ಕೆ ತಂದಿದ್ದರು. ಇದು ಸಂಪೂರ್ಣ ಕೃಷಿ ಜಮೀನುಗಳಾಗಿದ್ದು, ತೆಂಗು, ಅಡಿಕೆ, ಬಾಳೆ ಮೊದಲಾದ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗಿದೆ. ಇದನ್ನು ಕೆ.ಐ.ಎ.ಡಿ.ಬಿ. ಪರಿಶೀಲಿಸದೆ ಸ್ವಾಧೀನ ಮಾಡುತ್ತಿದ್ದು, ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೈತರು ಕೃಷಿಯನ್ನೇ ನಂಬಿ ಬದುಕುತ್ತಿದ್ದು, ಇವರಿಗೆ ಬೇರೆ ಆದಾಯವಿಲ್ಲ. ಆದ್ದರಿಂದ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಸ್ವಾಧೀನ ತಡೆಹಿಡಿದು, ಪರ್ಯಾಯ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಬೇಕು, ರೈತರ ಬದುಕಿನ ಹಿತದೃಷ್ಟಿಯಿಂದ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದರು.
ಇದಕ್ಕೆ ಸ್ಪಂದಿಸಿ ಪತ್ರ ಬರೆದಿರುವ ಸಚಿವರು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಂಸದ ಡಾ.ಕೆ.ಸುಧಾಕರ್, ಭೂಸ್ವಾಧೀನ ಪ್ರಸ್ತಾವ ಕೈಬಿಡುವಂತೆ ಮನವಿ ಮಾಡಿ ನಾನು ಬರೆದಿದ್ದ ಪತ್ರಕ್ಕೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಪ್ರಸ್ತಾವವನ್ನು ಮರುಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ. ಜಮೀನುಗಳಲ್ಲಿ ತೆಂಗು, ಅಡಿಕೆ, ಬಾಳೆ ಮುಂತಾದ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಹಿತದೃಷ್ಟಿಯಿಂದ ಈ ಭೂಸ್ವಾದೀನ ಪ್ರಸ್ತಾವವನ್ನು ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು ಎಂದು ರೈತರ ಪರವಾಗಿ ಮಾನ್ಯ ಸಚಿವರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.