ದ್ರೌಪದಿ ದೇವಿಗೆ ವಿಶೇಷ ಪೂಜೆ,ಸಾಂಸ್ಕೃತಿಕ ಕಾರ್ಯಕ್ರಮ
ಮಾಲೂರು, ಆ. ೨೩: ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ವಹ್ನಿಕುಲ ಕ್ಷತ್ರಿಯ ಸಂಘ ವಹ್ನಿ ಯುವ ಜಾಗೃತಿ ಸಂಘ ಇವರ ಆಶ್ರಯದಲ್ಲಿ ೧೬ನೇ ವರ್ಷದ ದ್ರೌಪತಿ ಜಯಂತಿ ಮಹೋತ್ಸವ ಅಂಗವಾಗಿ ದ್ರೌಪದಿ ಮೂರ್ತಿಯನ್ನು ಕುಳ್ಳರಿಸಿ ವಿಶೇಷ ಅಲಂಕಾರ ದೊಂದಿಗೆ ಪೂಜೆಗಳನ್ನು ಸಲ್ಲಿಸಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರತಿವರ್ಷದಂತೆ ಈ ವರ್ಷವೂ ಸಹ ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ವಹ್ನಿ ಕುಲ ಕ್ಷತ್ರಿಯ ಸಂಘ ಹಾಗೂ ಜಾಗೃತಿ ಸಂಘದ ವತಿಯಿಂದ ದ್ರೌಪದಿ ಜಯಂತಿ ಮಹೋತ್ಸವ ಅಂಗವಾಗಿ ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳಂದು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ಶುಕ್ರವಾರ ಬೆಳಗ್ಗೆ ದ್ರೌಪದಿಗೆ ಅಭಿಷೇಕದ ನಂತರ ಸುಂದರ ಹೂವಿನ ಮಂಟಪದಲ್ಲಿರಿಸಿ ಪೂಜಿಸಲಾಗುತ್ತಿದೆ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪೂಜೆಗೆ ಬರುವ ಸುಮಂಗಲರಿಗೆ ಅರಿಶಿನ ಕುಂಕುಮ ಮತ್ತು ಮಂಗಳದ್ರವ್ಯಗಳನ್ನು ನೀಡಲಾಯಿತು. ಗ್ರಾಮಗಳಿಂದ ಮಹಿಳೆಯರು ಆಗಮಿಸಿ ದೇವಿಗೆ ತಂಬಿಟ್ಟು ಆರತಿ ದೀಪೋತ್ಸವ ಬೆಳಗಿದರು. ವಹ್ನಿ ಯುವ ಜಾಗೃತಿ ಸಂಘದ ವತಿಯಿಂದ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯದ ಸಭಾಂಗಣ ಮತ್ತು ದ್ರೌಪದಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರವನ್ನು ಸಮಿತಿಯ ಅಧ್ಯಕ್ಷ ಎಂಪಿ ವಿಜಯ್ ಕುಮಾರ್ ನಡೆಸಿಕೊಟ್ಟರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶನಿವಾರ ಮಧ್ಯಾಹ್ನ ದ್ರೌಪದಿ ದೇವಿ ಅದ್ದೂರಿ ಮೆರವಣಿಗೆಯನ್ನು ಪಟ್ಟಣದ ರಾಜಭೀದಿಗಳಲ್ಲಿ ವಿವಿಧ ವೇಶಭೂಷಣಗಳು, ಡೊಳ್ಳು ಕುಣಿತಗಳು, ಸೇರಿದಂತೆ ವಿವಿಧ ರೀತಿಯ ಜಾನಪದ ಕಲಾತಂಡಗಳೊಂದಿಗೆ ಪುಷ್ಪಾಲಂಕೃತ ರಥದಲ್ಲಿಟ್ಟು ಅದ್ದೂರಿ ಮೆರವಣಿಗೆ ನಡೆಸಲಿದ್ದಾರೆ.
ವಹ್ನಿ ಕುಲ ಕ್ಷತ್ರಿಯ ಸಂಘದ ಅಧ್ಯಕ್ಷ ಎಂಪಿ ವಿಜಯ್ ಕುಮಾರ್, ಖಜಾಂಚಿ ಪಿ.ವೆಂಕಟೇಶ್, ಕಾರ್ಯದರ್ಶಿ ಕೃಷ್ಣಪ್ಪ, ಪೆರುಮಾಳಪ್ಪ, ವಹ್ನಿ ಯುವ ಜಾಗೃತಿ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಎಂ ಎಸ್, ಮಂಜು, ಆಂಜಿ, ವೆಂಕಟೇಶ್, ಸೂರಪ್ಪ, ಮುನಿರಾಜು, ಇನ್ನಿತರರು ಹಾಜರಿದ್ದರು.