ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮೈಲಿಗಲ್ಲು ಚಂದ್ರಯಾನ-3
ಕಲಬುರಗಿ:ಆ.23: ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನಿಗೂ ಭೂಮಿಗೆ ನಂಟು. ಚಂದ್ರನಲ್ಲಿರುವ ವಾತಾವರಣೆ ಸೇರಿದಂತೆ ಅಲ್ಲಿನ ಮಾಹಿತಿಯ ಬಗ್ಗೆ ವ್ಯಾಪಕವಾಗಿ ಸಂಶೋಧನೆ ಜರುಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತ ಕಳೆದ ವರ್ಷ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಪಾದಾರ್ಪಣೆ ಮಾಡುವ ಮೂಲಕ ಇಡೀ ವಿಶ್ವವೇ ಭಾರತದೆಡಗೆ ತಿರುಗಿ ನೋಡುವಂತೆ ಮಾಡುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಲಾಯಿತು ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಐತಿಹಾಸಿಕ, ದಾಖಲೆಯ 4000ನೇ ಕಾರ್ಯಕ್ರಮವಾದ ‘ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ’ಯ ಕಾರ್ಯಕ್ರಮವನ್ನು ಶುಕ್ರವಾರ ಸಂಜೆ ಹರ್ಷದಿಂದ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತದ ಚಂದ್ರಯಾನ ಯೋಜನೆ ಚಂದ್ರನನ್ನು ಸ್ಪರ್ಷಿಸುವುದು ಮಾತ್ರವಲ್ಲ. ಜೊತೆಗೆ ಚಂದ್ರನಲ್ಲಿ ಕಂಡುಬರುವ ಭೌಗೋಳಿಕ ಲಕ್ಷಣಗಳು ಸೇರಿದಂತೆ ಸಮಗ್ರವಾದ ಅಧ್ಯಯನವಾಗಿದೆ. ಬಾಹ್ಯಾಕಾಶ ಯೋಜನೆಗಳು ಜನರ ಜೀವನದ ಮಟ್ಟವನ್ನು ಸುಧಾರಿಸುವಲ್ಲಿ ಪೂರಕವಾಗಿವೆ. ಹವಾಮಾನ ಮೂನ್ಸೂಚನೆ, ದೂರವಾಣಿ ಕರೆ, ಮಾಹಿತಿ ಪ್ರಸಾರ, ಇಂಟರನೆಟ್ ಸಂಪರ್ಕ, ನೈಸರ್ಗಿ ಆಪತ್ತುಗಳ ಸೂಚನೆ, ಹವಾಮಾನ ವರದಿ ಸೇರಿದಂತೆ ಮತ್ತಿತರ ಪ್ರಮುಖ ಸಂಗತಿಗಳ ಬಗ್ಗೆ ಮಾಹಿತಿ ಒದಗಿಸುತ್ತವೆ. ಯುವಕರು ವಿಜ್ಞಾನ ಮತ್ತು ತಂತ್ರಜ್ಞಾನದತ್ತ ಚಿತ್ತಹರಿಸಬೇಕಾಗಿದೆ ಎಂದರು.
ಬಸವೇಶ್ವರ ಸಮಾಜ ಸೇವಾ ಬಳಗವು ಕಳೆದ 7 ವರ್ಷಗಳ ಹಿಂದೆ ಪ್ರಾರಂಭವಾಗಿ ಇಂದಿಗೆ ಸಮಾಜಮುಖಿಯಾಗಿ ತನ್ನ 4000 ಕಾರ್ಯಕ್ರಮಗಳು ಯಶಸ್ವಿಯಾಗಿ ಮಾಡಿದೆ. ಬಳಗದ ಉದ್ದೇಶ ಸಮಾಜ ಸೇವೆಯಾಗಿದೆ. ಮುಂದೆಯೂ ಕೂಡಾ ನಿರಂತರವಾಗಿ ಬಳಗವು ತನ್ನ ಕಾರ್ಯಗಳನ್ನು ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ನಿಲೊಫರ್ ಶೇಖ್, ಪ್ರಮುಖರಾದ ಶಿವಲೀಲಾ ಪೋತದಾರ, ರಾಧಿಕಾ ಜಮಾದಾರ, ಶೇರ್ ಅಲಿ, ಕಲ್ಮೇಶ ಯಳಮೇಲಿ ಸೇರಿದಂತೆ ಮತ್ತಿತರರಿದ್ದರು.