ವಾಹನ ಅಡ್ಡಗಟ್ಟಿ ಹಣ ವಸೂಲಿ: ಮೂವರು ಯುವಕರ ಬಂಧನ
ಕಲಬುರಗಿ,ಆ.23-ನಗರದ ರಿಂಗ್ ರಸ್ತೆಯಲ್ಲಿ ಖರ್ಗೆ ಪೆಟ್ರೋಲ್ ಬಂಕ್ ಮತ್ತು ಹುಮನಾಬಾದ ರಿಂಗ್ ರೋಡ್ ಕಡೆಯಿಂದ ಹೋಗಿ ಬರುವ ಲಾರಿ, ಕಾರು ಸೇರಿ ಇತರೆ ವಾಹನಗಳನ್ನು ಅಡ್ಡಗಟ್ಟಿ ಹೆದರಿಸಿ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರ ಕಾಲೋನಿಯ ಲೋಕೇಶ ಅಶೋಕ ಸಾತಪೋತೆ (23), ಸೈಯದ್ ಅಲ್ತಾಫ್ ಸೈಯದ್ ತಾಜುದ್ದೀನ್ (22) ಮತ್ತು ಆದರ್ಶ ನಗರದ ಶುಭಂ ಗಜಾನನ ತನಬೋನೆ (26) ಎಂಬುವವರನ್ನು ಬಂಧಿಸಲಾಗಿದೆ.
ಈ ಸಂಬಂಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಕ್ಯೂರಿಟಿ ಗಾರ್ಡ್ ಸಾವು
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ಹೋಗುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಒಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಳಂದ ರಸ್ತೆಯ ರೈಲ್ವೆ ಓವರ್ ಬ್ರಿಜ್ ಹತ್ತಿರ ನಡೆದಿದೆ.
ನಗರದ ಆರ್ಚಿಡ್ ಮಾಲ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಶಿವಾನಂದ (30) ಎಂಬುವವರೆ ಮೃತಪಟ್ಟಿದ್ದು, ಈ ಸಂಬಂಧ ಅವರ ಸಹೋದರ ಶಿವಶರಣ ಮೇಟೆಕರ್ ಅವರು ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.