ಪೊಲೀಸರ ಮನೆಗೆ ಕನ್ನ: 1.20 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು
ಕಲಬುರಗಿ,ಆ.23-ಪೊಲೀಸ್ ಕಾನ್ಸ್‍ಸ್ಟೇಬಲ್ ಒಬ್ಬರ ಮನೆಗೆ ಕನ್ನ ಹಾಕಿರುವ ಕಳ್ಳರು ಮನೆಯಲ್ಲಿದ್ದ 1.20 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ಇಲ್ಲಿನ ಕಾಕಡೆ ಚೌಕ್ ಹತ್ತಿರದ ಜಾಧವ್ ಲೇಔಟ್‍ನಲ್ಲಿ ನಡೆದಿದೆ.
ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಕಾನ್ಸ್‍ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಮಂಜುಳಾ ನಾರಾಯಣ ಜಾಧವ್ (27) ಎಂಬುವವರ ಮನೆಯೇ ಕಳವಾಗಿದ್ದು, ರಕ್ಷಾ ಬಂಧನದ ಪ್ರಯುಕ್ತ ತವರು ಮನೆಯಾದ ಚೆಂಗಟಾ ತಾಂಡಾಕ್ಕೆ ಹೋಗಿದ್ದಾಗ ಕಳ್ಳರು ಮನೆಗೆ ಕನ್ನ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಮನೆಯಲ್ಲಿದ್ದ 80 ಸಾವಿರ ರೂ.ಮೌಲ್ಯದ 40 ಗ್ರಾಂ.ಬಂಗಾರದ ಎರಡು ಎಳೆಯ ತಾಳಿ ಚೈನ್ ಮತ್ತು 40 ಸಾವಿರ ರೂ.ಮೌಲ್ಯದ 20 ಗ್ರಾಂ.ಬಂಗಾರದ ಎರಡು ಎಳೆಯ ತಾಳಿ ಚೈನ್ ಸೇರಿ 1.20 ಲಕ್ಷ ರೂ.ಮೌಲ್ಯದ 60 ಗ್ರಾಂ.ಬಂಗಾರದ ಆಭರಣ ಕಳವು ಮಾಡಲಾಗಿದೆ ಎಂದು ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.