54 ಕೋ.ವೆಚ್ಚದಲ್ಲಿ 5 ಕೆರೆಗಳ ಅಭಿವೃದ್ದಿ ಶ್ಲಾಘನೀಯ
ಬೀಳಗಿ:ಅ.2:ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಗಳಿಂದ ಬೀಳಗಿ ತಾಲೂಕಿನಲ್ಲಿ ರೂ.54ಕೋಟಿ ವೆಚ್ಚದಲ್ಲಿ 5 ಕೆರೆಗಳ ಅಭಿವೃದ್ಧಿ ಮಾಡಿರುವುದು ಶ್ಲಾಘನೀಯ ಎಂದು ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವ್ಹಿ.ಜಿ.ರೇವಡಿಗಾರ ಹೇಳಿದರು.
ಪಟ್ಟಣದ ಶಾದಿ ಮಹಲ್‍ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಆಯೋಜಿಸಿದ ತಾಲೂಕಾ ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಸಂಘವು ಎಷ್ಟೊ ಕುಟುಂಬಗಳಿಗೆ ಸುಂದರ ಬದುಕನ್ನು ಕಟ್ಟಿ ಕೊಟ್ಟಿದೆ. ಇಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರಗಳು ಪಾರದರ್ಶಕವಾಗಿ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತವೆ. ಇಂದು ಹೆಣ್ಣು ಸಂತಾನಕ್ಕಿಂತ ಗಂಡು ಸಂತಾನ ಹೆಚ್ಚಾಗಿದ್ದು ಹೆಣ್ಣು-ಗಂಡು ಎಂಬ ತಾರತಮ್ಯ ಬಿಟ್ಟು ಒಂದಾಗಿ ಶ್ರಮಿಸಿದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜೆ ಮಾತನಾಡಿ ಧರ್ಮಸ್ಥಳ ಸರ್ವದಾನದ ಶ್ರೇಷ್ಠ ಸ್ಥಳ. ಮಂಜುನಾಥ ಸ್ವಾಮಿ ಅಭಯ ಸರ್ವರಿಗೂ ಶಾಸ್ವತವಾಗಿದೆ. ಇಲ್ಲಿ ನಿತ್ಯ ನೀಡುವ ಅನ್ನದಾನ ಎಂದೂ ನಿಂತಿಲ್ಲ. ಅನ್ನದಾನ ಪವಿತ್ರವಾದದ್ದು. ಧರ್ಮಸ್ಥಳದಲ್ಲಿ ಅಭಯದಾನ, ಅನ್ನದಾನ ಸೇವಿಸುವ ಭಕ್ತರಲ್ಲಿ ಯಾವುದೇ ಅನಾರೋಗ್ಯ ಕಾಣಿಸುವುದಿಲ್ಲ. ಲಕ್ಷಾಂತರ ಮಹಿಳೆಯರ ಬದುಕು ಬದಲಾಯಿಸಿ ಸುಂದರ ಜೀವನ ಕಲ್ಪಿಸುವಲ್ಲಿ ಧರ್ಮಸ್ಥಳ ಸಂಘದ ಪಾತ್ರ ಮಹತ್ವದ್ದಾಗಿದೆ. ಬಡತನ ನಿರ್ಮೂಲನೆಗಾಗಿ ಸಂಘ ಸ್ಥಾಪಿಸಲಾಗಿದೆ. ಇಂದು ಅನೇಕ ಕುಟುಂಬಗಳು ಆರ್ಥಿಕವಾಗಿ ಬದುಕು ಕಟ್ಟಿಕೊಂಡಿದ್ದಾರೆ. ತಗ್ಗಿ-ಬಗ್ಗಿ ಸಂಸ್ಕಾರದಿಂದ ಬದುಕುವುದೇ ಜೀವನ. ಒಬ್ಬ ಬಡರೈತನು ಎಂದು ಅಭಿವೃದ್ಧಿ ಹೊಂದುತ್ತಾನೆಯೋ ಅಂದೇ ದೇಶದ ಅಭಿವೃದ್ಧಿಯಾದಂತೆ. ರಾಜ್ಯದ 46 ಸಾವಿರ ಬಡ ವಿದ್ಯಾರ್ಥಿಗಳಿಗೆ ಸಂಘವು ಶಿಷ್ಯವೇತನ ನೀಡುತ್ತಿದೆ. ಧರ್ಮಸ್ಥಳದಲ್ಲಿ ಧಾನಧರ್ಮದಿಂದ ಸೇರಿದ ಹಣವನ್ನು ಹೆಣ್ಣುಮಕ್ಕಳ ಕಣ್ಣೀರು ವರೆಸುವ ಕಾರ್ಯ ನಡೆಯುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಶ್ರೀಕಾಂತ ಸಂದಿಮನಿ ವಹಿಸಿದ್ದರು. ಜಿಲ್ಲಾ ನಿರ್ದೇಶಕ ಚನ್ನಕೇಶವ, ತಾಲೂಕ ಮಧ್ಯವರ್ಜಿನಾ ಸಮಿತಿ ಅಧ್ಯಕ್ಷ ಶಿವಪ್ಪ ಅವಟಿ, ರವಿ ನಾಗನಗೌಡರ್, ನಿರ್ಮಲಾ ಮೋದಿ ಯೋಜನಾಧಿಕಾರಿ ಸುಬ್ರಾಯ್.ಕೆ ಇತರರು ಇದ್ದರು.