ಆಡು ಕುರಿ ಸಾಕಿ ಕುಬೇರರಾಗಿ
ವಿಜಯಪುರ: ಆ.23: ನಗರದ ಹೊರವಲಯದ ವಿಜಯಪುರ ಕೃಷಿ ವಿಜ್ಞಾನ ಕೇಂದ್ರದಲ್ಲಿ 3 ದಿವಸಗಳ ಆಡು ಮತ್ತು ಕುರಿ ಸಾಕಾಣಿಕೆ ತರಬೇತಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಉದ್ಘಾಟನಾ ಭಾಷಣದಲ್ಲಿ ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಡು ಸಾಕಾಣಿಕೆ ಒಂದು ಬೃಹತ್ ಉದ್ಯಮವಾಗಿ ಬೆಳೆಯುತ್ತಿದ್ದು, ಇದರಿಂದ ನಿರಂತರ ಆದಾಯ ಪಡೆಯಬಹುದಾಗಿದೆ. ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳಲ್ಲಿ ಕನಿಷ್ಟ ಅರ್ಧದಷ್ಟು ರೈತರು ಆಡು ಮತ್ತು ಕುರಿ ಸಾಕಾಣಿಕೆ ಮಾಡಬೇಕು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಉದ್ಯಮದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು. ಹಿಂದಿನ ವ್ಯವಸ್ಥಾಪನಾ ಮಂಡಳಿ ಸದಸ್ಯ ಸುರೇಶ ಗೊಣಸಗಿ ಮಾತನಾಡಿ, ರೈತರಿಗೆ ಧಾರವಾಡ ಕೃಷಿ ವಿವಿ ಯಿಂದ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಂತ್ರಿಕ ಸಲಹೆ, ಮಾರ್ಗದರ್ಶನವನ್ನು ವಿಜ್ಞಾನಿಗಳು ನಿರಂತರವಾಗಿ ಮಾಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎ. ಭೀಮಪ್ಪ ಮಾತನಾಡಿ, ಆಡು ಮತ್ತು ಕುರಿ ಸಾಕಾಣಿಕೆ ಮಾಡಲು ಪಶು ವೈಧ್ಯಕೀಯ ಇಲಾಖೆಯಿಂದ ಯೋಜನೆಗಳಿವೆ. ತರಬೇತಿ ಪಡೆದ ನಂತರ ಬ್ಯಾಂಕ್ ನಿಂದ ಸಾಲದ ಸೌಲಭ್ಯ ಸಿಗುವುದೆÀಂದು ತಿಳಿಸುತ್ತಾ, ಇದರಿಂದ ಹೆಚ್ಚನ ಮತ್ತು ನಿರಂತರ ಆದಾಯ ಪಡೆಯಬಹುದೆಂದರು. ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಎಸ್. ಸಜ್ಜನ ಮಾತನಾಡಿ, ಆಡು, ಕುರಿಗಳನ್ನು ನಮ್ಮ ಪೂರ್ವಿಕರು ಹಿಂದಿನಿಂದಲೂ ಸಾಕಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಇದರಲ್ಲಿ ವಿವಿಧ ತಳಿಗಳು ಲಭ್ಯವಿದ್ದು, ಅವುಗಳಿಂದ ಉತ್ತಮ ಆದಾಯ ಪಡೆಯಬಹುದೆಂದರು. ಇಂಡಿ ಕೃಷಿ ವಿಜ್ಞಾನ ಕೇಂದ್ರದ ಡಾ. ಶಿವಶಂಕರಮೂರ್ತಿ ಹಾಗೂ ಡಾ. ಪ್ರಸಾದ ಎಮ್. ಜಿ., ವೈಜ್ಞಾನಿಕ ಆಡು ಸಾಕಾಣೆ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಕೃಷಿಯಲ್ಲಿ ಆಡು ಮತ್ತು ಕುರಿ ಸಾಕಾಣಿಕೆ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಎಲ್ಲ ಕಸಬುಗಳಿಗಿಂತ ಹೆಚ್ಚಿನ ಆದಾಯ ಇದರಿಂದ ಪಡೆಯಬಹುದಾಗಿದೆ. ಇದನ್ನು ಬಡವರ ಏಟಿಎಂ ಎಂದೂ ಕರೆಯುತ್ತಾರೆ. ಕಾರಣ ರೈತರು ಇದರ ಲಾಭ ಪಡೆಯಬೇಕೆಂದರು. ಕೆವಿಕೆಯ ಹಿರಿಯ ವಿಜ್ಞಾನಿ ಡಾ. ಎಸ್. ಎಂ. ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶ್ವೇತಾ ಮನ್ನಿಕೇರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಸನ್ನ ಸ್ವಾಗತಿಸಿದರು. ಡಾ. ವಿಜಯಲಕ್ಷ್ಮೀ ಮುಂದಿನಮನಿ ವಂದಿಸಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ರೈತರು, ರೈತಮಹಿಳೆಯರು 3 ದಿವಸÀಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.