ಬಡವರಿಗೆ ಸಹಾಯ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರಕಿಸಿ:ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ
ವಿಜಯಪುರ, ಆ.23: ಬಡವರು, ಅಶಿಕ್ಷಿತರಿಗೆ ಸಹಾಯ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಮಾನವೀಯ ಮೌಲ್ಯಗಳ ಮೇಲೆ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸಹಾಯ-ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವಂತೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ನ್ಯಾಯಾಂಗ ಘಟಕ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅಧಿಕಾರಿಗಳಿಗೆ ಹಮ್ಮಿಕೊಂಡ ಲೋಕಾಯುಕ್ತ ಕಾಯ್ದೆಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಹುಟ್ಟು-ಸಾವು ಅನಿವಾರ್ಯ ಇವುಗಳ ನಡುವೆ ನಾವು ಸಮಾಜಕ್ಕೆ ನಾವು ಏನಾದರೂ ಮಹತ್ವ ಕೊಡುಗೆ ಕೊಡುವ ಮೂಲಕ ಮನುಷ್ವಯ ಜನ್ಮವನ್ನು ಸಾರ್ಥಕಗೊಳಿಸಬೇಕು. ಮೌಲ್ಯಯುತ ಹಾಗೂ ಮೌಲ್ಯಾಧಾರಿತ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಅಧಿಕಾರಿ-ಸಿಬಬಂದಿ ಕರ್ತವ್ಯವಾಗಿದೆ. ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನ ಒದಗಿಸಿದೆ. ಸಮೃದ್ಧವಾದ ಜೀವನ ನಡೆಸುವ ಹಕ್ಕು ಎಲ್ಲರಿಗಿದೆ. ಸಂವಿಧಾನದ ಆಶಯದಂತೆ ಯಾವುದೇ ಹಕ್ಕುಗಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ಆಡಳಿತದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರಿ ಸವಲತ್ತುಗಳನ್ನು ತಲುಪಿಸಿ ಸುಂದರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ಸಾರ್ವಜನಿಕರು ಹೊತ್ತು ತರುವ ವಿಧವಾ ವೇತನ, ಸಾಮಾಜಿಕ ಪಿಂಚಣಿ ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ವಿಳಂಬ ಮಾಡದೇ ತಮ್ಮ ಹಂತದಲ್ಲಿಯೇ ಪರಿಹರಿಸಲು ಪ್ರಯತ್ನಿಸಬೇಕು. ಹೀಗೆ ಪರಿಹರಿಸುವುದರಿಂದ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ದೊರೆತು ಮೇಲಾಧಿಕಾರಿಗಳಿಗೆ ತಲುಪದೇ ಇರುವುದರಿಂದ ಕಾರ್ಯಗಳಲ್ಲಿ ಬರುವ ಒತ್ತಡಗಳು ಕಡಿಮೆಯಾಗಿ ಕಾರ್ಯನಿರ್ವಹಿಸಲು ಸಹ ಹುಮ್ಮಸ್ಸು ಮೂಡಿ ಬಂದು, ಬಡ ಜನರ ಕಷ್ಟಕ್ಕೆ ಸ್ಪಂದಿಸಿರುವ ಸಂತೃಪ್ತ ಭಾವನೆ ಮೂಡುತ್ತದೆ ಎಂದು ಹೇಳಿದರು.
ನಾವು ಮಾಡುವ ಪ್ರತಿಯೊಂದು ಕಾರ್ಯವನ್ನು ಸಮಾಜ ಗಮನಿಸುತ್ತಿದೆ. ನಾವು ನಿರ್ವಹಿಸುವ ಕಾರ್ಯಗಳನ್ನು ಆತ್ಮಾವಲೋಕನ ಮಾಡಿಕೊಂಡು, ಉತ್ತಮವಾಗಿ ಸಾರ್ವಜನಿಕರಿಗೆ ಸೇವೆ ಒದಗಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು ಎಂದು ಹೇಳಿದರು.
ಸಾರ್ವಜನಿಕರಿಂದ ಬಂದ ದೂರುಗಳು ಸುಳ್ಳು ಎಂದು ಸಾಬೀತಾದರೆ, ದೂರುದಾರರ ಮೇಲೆ ಕ್ರಮ ಜರುಗಿಸಲು ಲೋಕಾಯುಕ್ತಕ್ಕೆ ಅಧಿಕಾರವಿದೆ. ಲೋಕಾಯುಕ್ತ ಅನುಮತಿ ಪಡೆದು ಸಂಬಂಧಪಟ್ಟ ನೌಕರರು ಅಂತಹ ದೂರುದಾರರ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಕಾಯ್ದೆ ಕುರಿತು ಸಮಗ್ರವಾಗಿ ವಿವರಿಸಿ ಸಾಧಕ-ಬಾಧಕಗಳ ಕುರಿತು ತಿಳಿಸಿದರು.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶಿವಾಜಿ ನಲವಡೆ ಅವರು ಮಾತನಾಡಿ, ಅಧಿಕಾರಿಗಳು ಸಮಾಜಕ್ಕೆ ಉತ್ತಮ ಕಾರ್ಯ ಮಾಡಬೇಕಾದರೆ ಕಾನೂನಿನ ಅರಿವು ಹೊಂದುವುದು ಅತ್ಯವಶ್ಯಕವಾಗಿದೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಂಡು ದೀನ ದಲಿತರಿಗೆ, ಬಡವರಿಗೆ, ಅಶಕ್ತರ ಜೀವನ ಮಟ್ಟ ಸುಧಾರಿಸಲು ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ನಾವು ನಿರ್ವಹಿಸುವ ಉತ್ತಮ ಕಾರ್ಯಗಳು ಎಂದಿಗೂ ನಮ್ಮ ಕೈ ಬಿಡುವುದಿಲ್ಲ. ಸರ್ಕಾರಿ ಯೋಜನೆಗಳ ಅನುಷ್ಠಾನ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು, ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ದೊರಕಿಸುವ ಮೂಲಕ ಜಿಲ್ಲೆಯ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಲೋಕಾಯುಕ್ತ ವಿಚಾರಣೆ ಶಾಖೆ ಉಪನಿಬಂಧಕ ಪ್ರಕಾಶ ಎಲ್. ನಾಡಗೇರ, ಲೋಕಾಯುಕ್ತ ಕಾನೂನು ಅಭಿಪ್ರಾಯದ ಸಹಾಯಕ ನಿಬಂಧಕ ಶುಭವೀರ, ಹಿರಿಯ ಸಿವ್ಹಿಲ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಎಸ್.ಹಾಗರಗಿ, ಪ್ರಧಾನ ಮತ್ತು ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅಂಬಲಿ, ಉಪ ಲೋಕಾಯುಕ್ತ ಆಪ್ತ ಕಾರ್ಯದರ್ಶಿ ಕಿರಣ ಪಿ.ಎಂ.ಪಾಟೀಲ, ವಿಜಯಪುರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ.ಮಲ್ಲೇಶ, ಲೋಕಾಯುಕ್ತ ಡಿ.ಎಸ್.ಪಿ. ಸುರೇಶ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.