ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿಗಾಗಿ ಆಗ್ರಹ
ಅಫಜಲಪುರ :ಆ.23: ಮೂರು ದಶಕಗಳ ಕಾಲ ಹೋರಾಟದ ಫಲವಾಗಿ ಸರ್ವೋಚ್ಛ ನ್ಯಾಯಾಲಯ ನಮ್ಮ ಸಮುದಾಯಕ್ಕೆ ಮೀಸಲಾತಿಯಲ್ಲಿ ನ್ಯಾಯ ಕಲ್ಪಿಸಿದೆ. ಆದರೆ ರಾಜ್ಯ ಸರ್ಕಾರದಿಂದ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುತ್ತಿಲ್ಲ. ಕೋರ್ಟ್ ಆದೇಶದಂತೆ ನಮಗೆ ಮೀಸಲಾತಿ ಶೀಘ್ರದಲ್ಲೇ ಜಾರಿಯಾಗಬೇಕು ಎಂದು ತಾಲೂಕಾ ಮಾದಿಗ ಸಮುದಾಯದ ಮುಖಂಡರು ಸರಕಾರಕ್ಕೆ ಆಗ್ರಹ ಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ತಾಲೂಕು ಸಮಿತಿಯ ಅಧ್ಯಕ್ಷ ಶ್ರೀಕಾಂತ ಮಾಶಳಕರ್ ಮಾತನಾಡಿ ರಾಜ್ಯ ಸರ್ಕಾರ ಮೀಸಲಾತಿ ವರ್ಗೀಕರಣ ಮಾಡದೇ ಇರುವುದರಿಂದ ನಮ್ಮ ಸಮುದಾಯಕ್ಕೆ ಮೀಸಲಾತಿ ಕೈ ತಪ್ಪಿ ಹೋಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮಾದಿಗರ ಸಂಖ್ಯೆ ಹೆಚ್ಚಿದ್ದರೂ ಕೂಡ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ರಾಜ್ಯ ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ತರುವ ವಿಳಂಬ ಧೋರಣೆ ನೀತಿ ಅನುಸರಿಸುವುದನ್ನು ಕೈಬಿಟ್ಟು ಶೀಘ್ರದಲ್ಲೇ ವರದಿ ಅನುಷ್ಠಾನಗೊಳಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಸಮಾಜದ ಮುಖಂಡ ರಾಜು ಕಟ್ಟಿಮನಿ ಮಾತನಾಡಿ ಪರಿಶಿಷ್ಟ ಜಾತಿ ವರ್ಗೀಕರಣ ಕುರಿತು
ಸುಪ್ರೀಂ ಕೋರ್ಟ್ ನಿಂದ ಐತಿಹಾಸಿಕ ತೀರ್ಪು ನೀಡಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿ ಯಥಾವತ್ತವಾಗಿ ಜಾರಿ ಮಾಡುವುದು ಅವಶ್ಯಕ ಎಂದರು.
ಜಿಲ್ಲಾ ಮಾದಿಗ ಸಮಾಜದ ಮುಖಂಡರಾದ ರಾಜು ಮುಕ್ಕಣ್ಣ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಮಾದಿಗ ಸಮಾಜದವರು ಸುಮಾರು 30 ವರ್ಷಗಳ ಕಾಲ ಒಳ ಮೀಸಲಾತಿಗಾಗಿ ಅರೆಬೆತ್ತಲೆ ಮೆರವಣಿಗೆ ಉಪವಾಸ ಸತ್ಯಾಗ್ರಹ, ಪಾದಯಾತ್ರೆ, ರಸ್ತೆ ತಡೆ, ಜೈಲ್ ಬರೊ ಚಳುವಳಿ ಹೀಗೆ ಅನೇಕ ಹೋರಾಟಗಳನ್ನು ಮಾಡಿದ ಫಲವಾಗಿ ಕೋರ್ಟ್ ಒಳ ಮೀಸಲಾತಿ ಆದೇಶ ಮಾಡಿದೆ. ಹೀಗಾಗಿ ಸರ್ಕಾರ ತಕ್ಷಣವೇ ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ತಹಸೀಲ ಕಚೇರಿಯವರಿಗೆ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ ಸಂಜೀವಕುಮಾರ ದಾಸರ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಭಾಗಣ್ಣ ಘತ್ತರಗಿ, ಅಂಬಾರಾಯ ಚಲಗೇರಾ, ದತ್ತು ಘೂಳನೂರ, ಶಿವಶಂಕರ ದೊಡ್ಮನಿ, ಸುನೀಲ ಕಟ್ಟಿಮನಿ, ದತ್ತು ಬಂಕಲಗಿ, ಶ್ರೀಮಂತ ಭಂಡಾರಿ, ಚಂದ್ರಕಾಂತ ಆನೂರ,ಪರಶುರಾಮ ಹಡಲಗಿ, ಚಂದ್ರಕಾಂತ ತೇಲ್ಕರ್, ನೂರಂದ ಹೂವಿನಳ್ಳಿ, ಹಿರಗಪ್ಪ ಬಿಲ್ವಾಡ, ಶರಣು ಕೇಶಾಪೂರ, ಶಿವಶಂಕರ ದೊಡ್ಮನಿ, ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಮಾಜದ ಮುಖಂಡರು ಯುವಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.