ಕಿಸಾನಸಭಾ ಜಿಲ್ಲಾ 8ನೇ ಸಮ್ಮೇಳನ ಚಲೋ
ಆಳಂದ:ಆ.23: ಕಲಬುರಗಿ ನಗರದ ಕನ್ನಡ ಭವನದಲ್ಲಿ ಇದೇ ಆಗಸ್ಟ್ 30ರಂದು ಮಧ್ಯಾಹ್ನ 12:30ಕ್ಕೆ ಅಖಿಲ ಭಾರತ ಕಿಸಾನ್ ಸಭಾ 8ನೇ ಜಿಲ್ಲಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿರುವ ಕಿಸಾನಸಭಾ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ ಅವರು, ಕೃಷಿ ಉಳಿಸಿ ದೇಶ ಉಳಿಸಿ, ರೈತರನ್ನು ಉಳಿಸಿ ದೇಶ ಉಳಿಸಲು ಬನ್ನಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಿ ಎಂದು ಅವರು ಮನವಿ ಮಾಡಿದರು.
ಪಟ್ಟಣದ ಕಿಸಾನಸಭಾ ಕಚೇರಿಯಲ್ಲಿ ನಡೆದ ಪೂರ್ವಸಭೆಯಲ್ಲಿ ಸಮ್ಮೇಳನ ಕರಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮ್ಮೇಳನದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಸಿದ್ದಣ್ಣಗೌಡ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕಾ. ಪಿ.ವಿ. ಲೋಕೇಶ್, ರಾಜ್ಯ ಉಪಾಧ್ಯಕ್ಷ ಬಾಬು ಹೊನ್ನಾ ಮುಂತಾದ ನಾಯಕರು ಪಾಲ್ಗೊಳ್ಳುವರು ಎಂದರು.
ರಾಜ್ಯ ಸರ್ಕಾರವು ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಭರವಸೆ ನೀಡಿದ್ದು, ಅದನ್ನು ಇಲ್ಲಿಯವರೆಗೂ ಕಾರ್ಯರೂಪಕ್ಕೆ ಜಾರಿ ಮಾಡಿಲ್ಲ ಎಂದು ಆರೋಪಿಸಿದ ಅವರು, ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಕಾನೂನು ರೂಪಿಸಿ, ಜಾರಿ ಮಾಡುವಂತೆ ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.
ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನು ಹಿಂಪಡೆದು ರೈತರಿಗೆ ನೀಡಿದ ಭರವಸೆಯಂತೆ ಈಡೇರಿಸಬೇಕು. ಪ್ರತಿ ಕ್ವಿಂಟಲಿಗೆ 15000ರೂ.ಗಳ ಬೆಂಬಲ ಬೆಲೆ ಘೋಷಿಸುವಂತೆ, ಪ್ರತಿ ಟನ್ ಕಬ್ಬಿಗೆ 3500ರೂ.ಗಳ ಬೆಲೆಯನ್ನು ನಿಗದಿಪಡಿಸುವಂತೆ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ಕೊಡುವಂತೆ, ರೈತರ ಕೃಷಿ ವಿದ್ಯುತ್ ಪಂಪಸೆಟ್ಟುಗಳ ಕುರಿತ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ಸಮ್ಮೇಳನದಲ್ಲಿ ಹಕ್ಕೊತ್ತಾಯ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಕೃಷಿಯಲ್ಲಿ ವೈಜ್ಞಾನಿಕ ನೀರಾವರಿ ಪದ್ಧತಿ ಜಾರಿಗೊಳಿಸುವಂತೆ, ಎಪಿಎಂಸಿ, ಖರೀದಿ ಕೇಂದ್ರಗಳು ರೈತ ಸ್ನೇಹಿಯಾಗಿರುವಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ, ಬೆಳೆವಿಮೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ರೈತ ಸ್ನೇಹಿ ಸಾಲ ನೀತಿಯನ್ನು ಜಾರಿಗೆ ತರುವಂತೆ, ಕೃಷಿ ಸಮಸ್ಯೆಗಳ ಪರಿಹಾರಕ್ಕೆ ಪ್ರದೇಶವಾರು ರೈತ ಸಂಘಟನೆಗಳ ತ್ರೈಮಾಸಿಕ ಸಭೆಯನ್ನು ಮಾಡುವಂತೆ, ಬರಗಾಲ ಮುಕ್ತ ಭಾರತಕ್ಕಾಗಿ ಯೋಜನೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಸಮ್ಮೇಳನದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ರಾಜಶೇಖರ ಬಸ್ಮೆ ಹಿರೋಳಿ ಮುಂತಾದವರು ಉಪಸ್ಥಿತರಿದ್ದರು.