ದೇಶದ ಭವಿಷ್ಯ ಯುವಕರ ಕೈಯಲ್ಲಿದೆ: ಮಹ್ಮದ್ ಶಕೀಲ್
ಬೀದರ್:ಆ.23: ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ, ಹೀಗಾಗಿ ಯುವಕರು ತಮ್ಮ ಜವಾಬ್ದಾರಿಯನ್ನರಿತು ಸುಂದರ ಸದೃಢ, ಸಮೃದ್ಧ ರಾಷ್ಟ್ರ ಕಟ್ಟುವಲ್ಲಿ ತಮ್ಮನ್ನು ತೊಡಿಗಿಸಿಕೊಳ್ಳಬೇಕಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀಮಹ್ಮದ್ ಶಕೀಲ್‍ರವರು ಹೇಳಿದರು. ಅವರು ಬೀದರ ವಿಶ್ವವಿದ್ಯಾಲಯದ ವತಿಯಿಂದ ಆಣದೂರವಾಡಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಮುಂದುವರೆದು ಕುಲಸಚಿವರು ಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನ ತುಂಬಾ ಸವಾಲಿನದಾಗಿದೆ. ಹೀಗಾಗಿ ಸಮಯಪ್ರಜ್ಞೆ ಹಾಗೂ ಸತತ ಪರಿಶ್ರಮದಿಂದ ಪ್ರಯತ್ನಪಟ್ಟಾಗ ಮಾತ್ರ ಯುವಕರು ತಮ್ಮ ಅಚಲವಾದ ಗುರಿಯನ್ನು ನಿಖರವಾಗಿ ತಲುಪಲು ಸಾಧ್ಯವೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೀದರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ.ಟಿ.ಆರ್.ದೊಡ್ಡೆಯವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಇಂತಹ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ವಿದ್ಯಾರ್ಥಿಗಳು ಸದಾ ಪ್ರಚಲಿತ ವಿದ್ಯಮಾನಗಳ ಕುರಿತು, ಆಗುಹೋಗುಗಳ ಜ್ಞಾನವಂತರಾಗಬೇಕು. ಭಾಷಾ ಕೌಶಲ್ಯ, ಮುಂತಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಗಳಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿದ್ದ ಬೀದರನ ಸಹಾರ್ದ ಸಂಸ್ಥೆಯ ಅಧಿಕಾರಿಗಳಾದ ಶ್ರೀಸುಬ್ರಹ್ಮಣ್ಯಪ್ರಭುರವರು ‘ಮಹಿಳಾ ಸಬಲೀಕರಣ’ ವಿಷಯದ ಕುರಿತು ಸುದೀರ್ಘವಾಗಿ ಉಪನ್ಯಾಸ ನೀಡಿದರು. ಇಂದಿನ ದಿನಮಾನಗಳಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತಿದ್ದಾಳೆ. ಅವಳ ಸಾಧನೆಗೆ ನಿಲುಕದ ಕ್ಷೇತ್ರ, ವಿಭಾಗಗಳೇ ಇಲ್ಲವೆನ್ನಬಹುದು. ಆ ಮಟ್ಟಿಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ದಕ್ಷತೆಯಿಂದ ಮಹಿಳೆ ಇಂದು ಸ್ವಾಭಿಮಾನದ ಜೀವನಕ್ಕಾಗಿ ಹಾತೊರೆಯುತ್ತಿರುವುದನ್ನು ಎಲ್ಲಾ ಕ್ಷೇತ್ರಗಳಲ್ಲೂ ಕಾಣಬಹುದಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶೇಷಾಧಿಕಾರಿಗಳು ಹಾಗೂ ಬೀದರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ.ರವೀಂದ್ರನಾಥ ವಿ.ಗಬಾಡಿಯವರು ಮಾತನಾಡುತ್ತಾ ಇಂತಹ ಶಿಬಿರಗಳು ಸಮಾಜದಲ್ಲಿ ಪರಸ್ಪರರನ್ನು ಸಮನ್ವಯದಿಂದ ಬಾಳಲು ಕಲಿಸುತ್ತವೆ. ಎಲ್ಲರನ್ನೂ ಅನೋನ್ಯವಾಗಿರುವಂತೆ ಮಾಡುತ್ತವೆ. ಜೀವನದಲ್ಲಿ ಉತ್ತಮ ಸಾಧನೆ ಮಾಡಲು ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಪೂರಕವಾಗುತ್ತದೆ ಎಂದರು. ಸಮಾರಂಭದಲ್ಲಿ ಆಣದೂರವಾಡಿ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಡಾ.ಸಂಜೀವಕುಮಾರ ಅತಿವಾಳೆ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀದತ್ತಾತ್ರಿ ಪಾಟೀಲ, ಶ್ರೀರಾಜಕುಮಾರ ಜಮಾದಾರ ಹಾಗೂ ಬೀದರ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅಧ್ಯಾಪಕರಾದ ಡಾ.ವಿಜಯಕುಮಾರ ಬೀಳಗಿ, ಡಾ.ಸುನೀತಾ ಸೂರ್ಯವಂಶಿ, ಶ್ರೀಶಿವರಾಜ ಪಾಟೀಲರವರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಬೀದರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ.ರಾಮಚಂದ್ರ ಗಣಾಪೂರರವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರದ ನಿರ್ದೇಶಕರಾದ ಡಾ.ಕೃಷ್ಣ ಕೂಡಿಯವರು ವಂದಿಸಿದರು, ಕನ್ನಡ ವಿಭಾಗದ ವಿದ್ಯಾರ್ಥಿ ಸತೀಶ ಕಾರ್ಯಕ್ರಮವನ್ನು ನಿರೂಪಿಸಿದರು.