ನಂಜನಗೂಡು ರಾಯರ ಮಠದಲ್ಲಿ ವೈಭವದ ಉತ್ತರಾರಾಧನೆ
ವಿಜಯಪುರ,23: ಕಲಿಯುಗದ ಕಾಮಧೇನು-ಕಲ್ಪವೃಕ್ಷ ಸದೃಶರಾಗಿ ಭಕ್ತ ಜನರ ಕಷ್ಟಗಳನ್ನು ಕಳೆದು ಇಷ್ಟಾರ್ಥ ಗಳನ್ನು ಅನುಗ್ರಹಿಸುತ್ತಿರುವ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 352ನೇ ಆರಾಧನಾ ಮಹೋತ್ಸವದಂಗವಾಗಿ ಇಂದು ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಉತ್ತರಾರಾಧನೆಯು ಅತ್ಯಂತ ಭಕ್ತಿಪುರಸ್ಸರವಾಗಿ ಜರುಗಿತು.
ಅದರಂಗವಾಗಿ ಬೆಳಿಗ್ಗೆ ಸುಪ್ರಭಾತ,ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ ಜರುಗಿದವು. ಬಳಿಕ ನಡೆದಅಷ್ಟೋತ್ತರ ಬಳಿಕ ಫಲ ಪಂಚಾಮೃತ ಅಭಿಷೇಕ ಭಕ್ತರ ಮನದಲ್ಲಿ ಭಕ್ತಿಯ ಪುಗ್ಗೆ ಪುಟಿದೆದ್ದಿತು.
ಬೆಳಿಗ್ಗೆ 11ಗಂಟೆಗೆ ಪ್ರಲ್ಹಾದರಾಜರ ಉತ್ಸವ ಮೂರ್ತಿಗೆ ಪಾದಪೂಜೆ ಸಲ್ಲಿಸುವದರೊಂದಿಗೆ ರಾಜಬೀದಿಯ ಭವ್ಯ ರಥೋತ್ಸವಕ್ಕೆ ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ ಚಾಲನೆ ನೀಡಿ ಮಾತನಾಡಿದರು.
ಹೂವಿನಿಂದ ಅಲಂಕೃತ ವಾಹನದಲ್ಲಿ ಕುಳ್ಳಿರಿಸಿದ ಪ್ರಲ್ಹಾದರಾಜರ ಉತ್ಸವ ಮೂರ್ತಿ ಹಾಗೂ ಗುರುಸಾರ್ವಭೌಮರ ಭಾವ ಚಿತ್ರದ ಆಕರ್ಷಣೆ ತಂದಿತು. ಜುಮನಾಳದ ಪ್ರಸಿದ್ಧ ಜೋತಿಷಿ ರಾಮಭಟ್ ಮನೆತನದ ಕಿರಣಭಟ್ ಅವರ ನೇತ್ರತ್ವದ ಪಂಢರಪುರ ವಿಠ್ಠಲ ಮಂದಿರದ ಭಕ್ತರು ವಾರಕರಿ ಸಂಪ್ರದಾಯದಂತೆ ವೇಷ ಭೂಷಣ ತೊಟ್ಟು, ತಮ್ಮ ಸುಮಧುರ ಕಂಠದಿಂದ ಲಯಬದ್ಧವಾಗಿ ಭಜನೆ ಮಾಡುತ್ತ, ಮೆರವಣಿಗೆಯುದ್ದಕ್ಕೂ ಭಕ್ತಿ ಭಾವ ಮೆರೆದರು.
ಪ್ರಲ್ಹಾದರಾಜರ ಉತ್ಸವ ಮೂರ್ತಿಯನ್ನು ಶ್ರೀಮಠದ ಆವರಣದಲ್ಲಿ ತರುತ್ತಿದ್ದಂತೆ ಭಕ್ತರು ಭಕ್ತಿ ಭಾವದಿಂದ ತಮ್ಮ ಶ್ರದ್ಧೆ ಯನ್ನು ಪ್ರದರ್ಶಿಸಿದರಲ್ಲದೇ, ಮೂರ್ತಿಯನ್ನು ಪ್ರದಕ್ಷಿಣೆ ಹಾಕಿಸುತ್ತಿದ್ದಂತೆ ಅದರ ಸುತ್ತಲೂ ತಾವು ಪ್ರದಕ್ಷಿಣೆ ಹಾಕಿದರು.
ಪಂಡಿತ ಮಧ್ವೇಶಾಚಾರ್ಯ ಜೋಶಿ(ಮುತ್ತಗಿ) ರಾಯರ ಮಹಿಮೆ ಕುರಿತು ಪ್ರವಚನ ನೀಡಿ, ಗುರುಸ್ಮರಣೆ ಮಾಡಿದಲ್ಲಿ ಸಕಲ ಆಪತ್ತು ದೂರವಾಗುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಭಗವಂತನ ದರ್ಶನ ಮಾಡಿಸಲು ಸಹ ಗುರುಗಳ ಮಾರ್ಗದರ್ಶನ ಅವಶ್ಯ ಎಂದ ಅವರು, ಗುರುರಾಯರಿಗೆ ಸಮಾನವಾಗಿ ಗುರುಗಳು ಯಾರೂ ಇಲ್ಲ ಕಾರಣ ಅವರು ಅಭಿಷ್ಟ ಪೂರ್ಣ ಮಾಡುವ ಗುರುಸಾರ್ವಭೌಮರು ಎಂದರು.
ಬಳಿಕ ಶ್ರೀಮಠದ ಆವರಣದಲ್ಲಿ ನಡೆದ ಭವ್ಯ ರಥೋತ್ಸವವಂತೂ ಸಂಗೀತ-ವಾದ್ಯ- ನೃತ್ಯ ಮುಂತಾದವುಗಳಿಂದ ಭೋರ್ಗರೆದು, ಎಲ್ಲೆಲ್ಲೂ ಭಕ್ತಿಯ ಪರಾಕಾಷ್ಠೆ ಮೆರೆಯಿತು. ಗುರುಸಾರ್ವಭೌಮರ ಕುರಿತಾದ ಹಾಡುಗಳನ್ನು ಹಾಡುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ರಥೋತ್ಸವದ ಮೇಲೆಲ್ಲ ಪುಷ್ಪ ವೃಷ್ಟಿಮಾಡಲಾಯಿತು. ನೆರೆದ ಭಕ್ತರೆಲ್ಲ ಭಾವ ಪುಳಕಿತರಾಗಿ ಕುಣಿದು ಕುಪ್ಪಳಿಸಿದರು. ಭಕ್ತರೆಲ್ಲ ಮೈತುಂಬ ಗುಲಾಲು ಎರಚಿಕೊಂಡು ಭಕ್ತಿ ಭಾವ ಮೆರೆದರು.
ಬಳಿಕ ಪ್ರಲ್ಹಾದರಾಜರ ಉತ್ಸವ ಮೂರ್ತಿಗೆ ಕನಕಾಭಿಷೇಕ ಪಾದ ಪೂಜೆ ನೆರವೇರಿಸಲಾಯಿತು. ಆನಂತರ ಅರ್ಚನೆ ನೈವೇದ್ಯ, ಅಲಂಕಾರ, ಮಹಾ ಮಂಗಳಾರತಿ ಜರುಗಿ ತೀರ್ಥ ಪ್ರಸಾದ ನಡೆಯಿತು.
ಉತ್ತರಾರಾಧನೆ ಪ್ರಯುಕ್ತ ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರು ಶ್ರೀಮಠಕ್ಕೆ ಬಂದು ಗುರುಸಾರ್ವಭೌಮರ ವೃಂದಾವನದ ದರ್ಶನ ಪಡೆದು ಪುನೀತರಾದರು. ಭಕ್ತರು ತಮಗೆ ತಿಳಿದಂತೆ ವೃಂದಾವನದ ಸುತ್ತ ಪ್ರದಕ್ಷಿಣೆ ಹಾಕುತ್ತ, ಮನದಲ್ಲಿ ಗುರು ರಾಯರನ್ನು ಸ್ಮರಿಸುತ್ತ, ಭಕ್ತಿಯಿಂದ ಮನದಾಳದಲ್ಲಿ ಪ್ರಾರ್ಥಿಸುತ್ತಿದ್ದುದು ಕಂಡು ಬಂದಿತು.
ವೃಂದಾವನವನ್ನು ಶ್ರೀಮಠದ ಅರ್ಚಕರಾದ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯರು ಹಾಗೂ ದಾಮೋದರಾ ಚಾರ್ಯರೊಂದಿಗೆ ಪವಮಾನ ಜೋಶಿ ಸೇರಿಕೊಂಡು ವಿವಿಧ ಬಗೆಯ ಫಲಪುಷ್ಪಗಳಿಂದ ಅಲಂಕರಿಸಿದ್ದು ಭಕ್ತರ ಕಣ್ಮನ ಸೆಳೆಯಿತು.
ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ, ವಾಮನರಾವ ದೇಶಪಾಂಡೆ, ಶ್ರೀಕೃಷ್ಣ ಪಡಗಾನೂರ, ಕಿರಣ ಭಟ್ ಜೋಶಿ( ಜುಮನಾಳಕರ), ಅಶೋಕ ದಿಕ್ಷಿತ, ಶಾಮಭಟ್ಟ ಜೋಶಿ, ಶಂಭು ಭಟ್ ಜೋಶಿ, ಕಿರಣ ಕುಲಕರ್ಣಿ, ಗುರುರಾಜ ಸೊಂಡೂರ, ಭೀಮಣ್ಣ ಕುಲಕರ್ಣಿ, ವಿಜಯೀಂದ್ರ ನಾಮಣ್ಣ, ಮನೋಜ ಶಹಾಪುರ, ಬಂಡಾಚಾರ್ಯ ಜೋಶಿ(ಕೂಡಗಿ), ವಿಜಯಿಂದ್ರ ಜೋಶಿ, ಅಶೋಕ ತಾವರಗೇರಿ ಮೊದಲಾದವರು ಭಾಗವಹಿಸಿದ್ದರು.