ಶ್ರಾವಣ ಸಂಜೆ ಕಾರ್ಯಕ್ರಮ
ಲಕ್ಷ್ಮೇಶ್ವರ,ಆ.23: ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿರುವ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಪತ್ರಿಕಾರಂಗ ಕುರಿತು ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರ ಮಠ ಅವರು ಮಾತನಾಡಿ ಸ್ವಾತಂತ್ರ ಪೂರ್ವದಿಂದ ಹಿಡಿದು ಸ್ವಾತಂತ್ರ್ಯ ನಂತರದ ಇತ್ತೀಚಿನವರೆಗೂ ಸಮಗ್ರ ಬೆಳವಣಿಗೆ ಮತ್ತು ದೇಶದ ಅಭಿವೃದ್ಧಿ ಸಾಮಾಜಿಕ ಪರಿವರ್ತನೆಯಲ್ಲಿ ಪತ್ರಿಕೆಗಳು ತಮ್ಮದೇ ಆದ ಶೈಲಿಯಲ್ಲಿ ಕಾರ್ಯವನ್ನು ಮಾಡುತ್ತಿವೆ ಇಂದು ಜನಸಾಮಾನ್ಯರು ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಪತ್ರಕರ್ತ ನಾಗರಾಜ ಹಣಗಿ ಮಾತನಾಡಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜದಲ್ಲಿ ಮೌನಕ್ರಾಂತಿ ಮಾಡಲು ಪತ್ರಿಕೆಗಳು ತಮ್ಮದೇ ಆದ ಕಾಣಿಕೆಗಳನ್ನು ನೀಡಿವೆ ಪತ್ರಿಕಾ ರಂಗಕ್ಕೆ ತನ್ನದೇ ಆದ ಇತಿಹಾಸವಿದೆ. ಜನರು ಪತ್ರಿಕಾ ರಂಗದ ಬೆಳವಣಿಗೆಗೆ ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಮತ್ತೋರ್ವ ಪತ್ರಕರ್ತ ಶಿವಲಿಂಗಯ್ಯ ಹೊತ್ತಿಗೆ ಮಠ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ಅತ್ಯಂತ ನಿಖರವಾದ ಮತ್ತು ಸ್ಪಷ್ಟವಾದ ಮಾಹಿತಿ ನೀಡುವ ಜ್ಞಾನಾರ್ಜನೆಗೆ ಪೂರಕವಾಗಿರುವ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು. ಪ್ರತಿನಿತ್ಯದ ಬೆಳವಣಿಗೆಗಳ ಮೇಲೆ ಬೆಳಕು ಚೆಲುವ ಪತ್ರಿಕೆಗಳ ಮಹತ್ವದ ಕುರಿತು ಕಾರ್ಯಗಾರ ಗಳು ನಡೆಯಬೇಕು ಎಂದು ಹೇಳಿದರು. ಪತ್ರಕರ್ತ ಅಶೋಕ ಸೊರ್ಟೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಬಸವರಾಜ್ ಬಾಳೇಶ್ವರ ಮಠ ಮತ್ತು ಕ ಕಾ ನಿಪ ಸಂಘದ ಪ್ರಶಸ್ತಿ ಪುರಸ್ಕೃತ ಮಹಾಳಿಂಗರಾಯ ಪೂಜಾರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ ನವಲೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಿ ಬಿ ಕರಾಟೆ ಸಿಜಿ ಹಿರೇಮಠ ಎಸ್ ಬಿ ಕೊಣ್ಣೂರ ಈಶ್ವರ ಮೆಡ್ಲೇರಿ ನಿಂಗಪ್ಪ ಹವಾಲ್ದಾರ ನಿಂಗಪ್ಪ ಗೊರವರ ಗಂಗಾಧರ ಅರಳಿ ನಿರ್ಮಲ ಅರಳಿ ಇದ್ದರು.
ತೇಜಸ್ವಿನಿ ಬಿಂಕದಕಟ್ಟಿ ನಂದಿನಿ ಮಾಳವಾಡ ಪ್ರತಿಭಾ ಮಹಾಜನ್ ಶೆಟ್ಟರ್ ರತ್ನಾಕರ್ಕಿ ಚೈತ್ರಾ ಯಾಳಗಿ ನಿರ್ವಹಿಸಿದರು.