ಸಚಿವ ಸೋಮಣ್ಣರಿಂದ ಹೆದ್ದಾರಿ ಕಾಮಗಾರಿ ಪರಿಶೀಲನೆ
ತುಮಕೂರು, ಆ. ೨೩- ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕುರಿತಂತೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಮಾತನಾಡಿದ ಸಚಿವ ಸೋಮಣ್ಣ ಅವರು, ರಾಜ್ಯದ ಹೆದ್ದಾರಿಗಳ ಅಭಿವೃದ್ಧಿ ಹಾಗೂ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಕೈಗೆತ್ತಿಕೊಳ್ಳುವ ಸಂಬಂಧ ಈಗಾಗಲೇ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿರವರೊಂದಿಗೆ ಚರ್ಚೆ ಮಾಡಿದ್ದೇನೆ. ನಮ್ಮ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಹೆದ್ದಾರಿಗಳ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ತುಮಕೂರು-ಶಿವಮೊಗ್ಗ ಹೆದ್ದಾರಿ ಚತುಷ್ಪಥ ರಸ್ತೆಯಲ್ಲಿ ಬಾಕಿ ಉಳಿದಿರುವ ಮಲ್ಲಸಂದ್ರದಿಂದ ಕರಡಿವರೆಗಿನ ಕಾಮಗಾರಿಯನ್ನು ಶೀಘ್ರ ಕೈಗೊಂಡು ಪೂರ್ಣಗೊಳಿಸಬೇಕು. ಇದಕ್ಕೆ ಉಂಟಾಗಿರುವ ಅಡ್ಡಿಯನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳುವಂತೆಯೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಚಿವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ-೨೦೬ ಅಗಲೀಕರಣ ಕಾರ್ಯಕ್ಕೆ ಭೂಸ್ವಾಧೀನಗೊಂಡಿರುವ ರೈತರಿಗೆ ಪರಿಹಾರ ಕೊಡದಿದ್ದರೆ ಅಂತಹವರನ್ನು ಗುರುತಿಸಿ ಶೀಘ್ರ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ರೈತರಿಗೆ ಸೂಕ್ತ ಪರಿಹಾರ ಕೊಟ್ಟರೆ ಅವರೇಕೆ ಕಾಮಗಾರಿಗಳಿಗೆ ಅಡ್ಡಿ ಪಡಿಸುತ್ತಾರೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ತುಮಕೂರು ನಗರದ ಬೈಪಾಸ್ ರಸ್ತೆ ಮತ್ತು ಎನ್.ಹೆಚ್. ೨೦೬ ರಸ್ತೆಗಳ ಪ್ರಗತಿ ಕಾರ್ಯದ ಬಗ್ಗೆಯೂ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭಾಗಿಯಾಗಿದ್ದರು.