ತಾಯಿ, ಪತ್ನಿ ಇಬ್ಬರನ್ನೂ ಕೊಂದಡಿ ಗ್ರೂಪ್ ನೌಕರ ಪರಾರಿ
ರಾಯಚೂರು,ಆ.೨೩- ಕೌಟುಂಬಿಕ ಕಲಹದಿಂದ ರೊಚ್ಚಿಗೆದ್ದು ತನ್ನ ತಾಯಿ ಹಾಗೂ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ವ್ಯಕ್ತಿಯೊಬ್ಬ ಪರಾರಿಯಾಗಿರುವ ದುರ್ಘಟನೆ ಲಿಂಗಸಗೂರು ತಾಲೂಕಿನ ಮುದ್ಗಲ್ ಪಟ್ಟಣದಲ್ಲಿ ನಡೆದಿದೆ.
ಮುದ್ಗಲ್ ಪಟ್ಟಣದ ತಾಯಿ ದ್ಯಾಮಮ್ಮ (೬೬) ಹಾಗೂ ಜ್ಯೋತಿ (೨೩) ಇಬ್ಬರನ್ನೂ
ಕೊಲೆಗೈದು ಪರಾರಿಯಾಗಿರುವ ದುರಗಪ್ಪ ಬಂಧನಕ್ಕೆ ಪೊಲೀಸರು ಶೋಧ ಕೈಗೊಂಡಿದ್ದಾರೆ.
ಮುದ್ಗಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರನಾದ ದುರಗಪ್ಪನ ಕುಟುಂಬ ಇಲ್ಲಿನ ಆಸ್ಪತ್ರೆಯ ಕ್ವಾರ್ಟರ್ಸ್‌ನಲ್ಲಿ ವಾಸವಾಗಿತ್ತು.
ಪ್ರತಿನಿತ್ಯ ಮನೆಯಲ್ಲಿ ಕಲಹ ನಡೆಯುತ್ತಿತ್ತು. ದುರಗಪ್ಪ ಮದ್ಯ ಸೇವಿಸಿ ಬಂದು ತಾಯಿ ಹಾಗೂ ಪತ್ನಿಗೆ ಮನಸೋಇಚ್ಛೆ ಥಳಿಸುತ್ತಿದ್ದು,ನಿನ್ನೆ ತಡರಾತ್ರಿ ಕಂಠಪೂರ್ತಿ ಕುಡಿದು ಬಂದ ಆತ ಇಬ್ಬರನ್ನೂ ಕೊಲೆಗೈದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮುದ್ಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಶೋಧ ಕೈಗೊಂಡಿದ್ದಾರೆ