ಕ್ಷಯ ರೋಗ ನಿರ್ಮೂಲನೆಗೆ ಕೈಜೋಡಿಸಿ
ದೇವದುರ್ಗ;ಆ೨೩: ಕ್ಷಯ ರೋಗ ವಾಸಿಯಾಗುವ ಕಾಯಿಲೆಯಾಗಿದ್ದು ರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ವೈದ್ಯಾಧಿಕಾರಿ ಡಾ.ನಿರ್ಮಲಾ ದೇವಿ ಹೇಳಿದರು.
ಪಟ್ಟಣದ ನೇತಾಜಿ ಓಣಿ ಅಂಗನವಾಡಿ ಕೇಂದ್ರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಆ.೨೧ರಿಂದ ೩೧ರವರೆಗೆ ಕ್ಷಯರೋಗ ಪತ್ತೆಹಚ್ಚುವ ಅಭಿಯಾನ ನಡೆಯಲಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ.ಕ್ಷಯರೋಗ ಮೈಕೋಬ್ಯಾಕ್ತಿರಿಯ ಟೂಬರಕ್ಯೂಲೆ ಎಂಬ ಸೂಕ್ಷ್ಮಣು ಜೀವಿಯಿಂದ ಬರುತ್ತದೆ. ಇದು ಸಾಂಕ್ರಾಮಿಕ ಖಾಯಿಲೆಯಾಗಿದ್ದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ೨೦೨೫ರ ವೇಳೆಗೆ ಕ್ಷಯ ನಿರ್ಮೂಲನೆ ಮಾಡುವ ಗುರಿ ಹೊಂದಿದ್ದು ಜನರ ಸಹಕಾರ ನೀಡಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ ಮಾತನಾಡಿ, ಎರಡು ವಾರಕ್ಕಿಂತಲೂ ಹೆಚ್ಚು ಕೆಮ್ಮು, ಕಫದಲ್ಲಿ ರಕ್ತ ಬೀಳುವುದು, ಕ್ರಮೇಣ ತೂಕ ಕಡಿಮೆ ಆಗುವುದು, ಹಸಿವು ಕಡಿಮೆ ಆಗುವುದು, ಸಂಜೆವೇಳೆ ಜ್ವರ ಬರುವುದು ಈ ತರಹದ ಲಕ್ಷಣಗಳು ಕಾಣಿಸಿದಲ್ಲಿ ತಡಮಾಡದೆ ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕಫ ಪರೀಕ್ಷೆ ಮಾಡಿಸಬೇಕು. ರೋಗ ನಿರ್ಮೂಲನೆಗಾಗಿ ರೋಗಿಯ ಬ್ಯಾಂಕ್ ಖಾತೆಗೆ ಪ್ರತಿತಿಂಗಳು ೫೦೦ರೂ. ಪೌಷ್ಟಿಕ ಆಹಾರ ಸೇವನೆಗೆ ಜಮಾ ಮಾಡಲಾಗುತ್ತದೆ ಎಂದರು.
ಆಶಾ ಕಾರ್ಯಕರ್ತೆಯರಾದ ತಾಯಮ್ಮ, ಮಹ್ಮದಿ, ಅಂಗನವಾಡಿ ಕಾರ್ಯಕರ್ತೆಯರಾದ ಮುತ್ತಮ್ಮ, ರತ್ನಮ್ಮ ಇತರರಿದ್ದರು.