ಗಬ್ಬೂರು ಪಿಡಿಒ ವಿರುದ್ದ ಕ್ರಮ ಜರುಗಿಸಿ
ದೇವದುರ್ಗ:ಆ೨೩:ನಿಯಮ ಬಾಹಿರ ಸಿಬ್ಬಂದಿ ನೇಮಕ, ಅನುದಾನ ದುರ್ಬಳಕೆ ಆಧಾರದ ಮೇಲೆ ಗಬ್ಬೂರು ಪಿಡಿಒ ಶಿವಕುಮಾರ ವಿರುದ್ದ ಕ್ರಮ ಜರುಗಿಸಲು ಆಗ್ರಹಿಸಿ ತಾಪಂ ಕಚೇರಿಯಲ್ಲಿ ಇಒ ಬಸವರಾಜ ಹಟ್ಟಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಗುರುವಾರ ಮನವಿ ಸಲ್ಲಿಸಿತು.
ಗಬ್ಬೂರು ಗ್ರಾಪಂ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕದಲ್ಲಿ ವಾಹನ ಚಾಲಕರು, ಸ್ವಚ್ಛಗಾರರನ್ನು ನಿಯಮಬಾಹಿರವಾಗಿ ನೇಮಕ ಮಾಡಿದ್ದು ಯಾವುದೇ ಪ್ರಕಟಣೆ ನೀಡಿಲ್ಲ. ಯಾವುದೇ ಸಿಬ್ಬಂದಿ ನೇಮಕ ಮುನ್ನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಬೇಕು. ಅಲ್ಲದೆ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಅಧ್ಯಕ್ಷ, ಸದಸ್ಯರ ಗಮನಕ್ಕೆ ತಾರದೆ ನೇಮಕ ಮಾಡಿಕೊಂಡಿದ್ದಾರೆ.
೨೦೨೨-೨೩ನೇ ಸಾಲಿನ ಶಿಶು ಪಾಲನ ಕೇಂದ್ರಕ್ಕೆ ಬಂದ ಅನುದಾನವನ್ನು ಕೇಂದ್ರ ತೆರೆಯದೆ ೧ಲಕ್ಷ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ. ಗಬ್ಬೂರು ಸಾರ್ವಜನಿಕ ಆಸ್ಪತ್ರೆಗೆ ಬಂದ ೩ಲಕ್ಷ ರೂ. ಅನುದಾನವನ್ನು ನಕಲಿ ದಾಖಲೆ ಸೃಷ್ಠಿಸಿ ಅನುದಾನ ಎತ್ತಿದ್ದಾರೆ. ೨೦೨೨-೨೦೨೪ರವರೆಗೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಪುಸ್ತಕ ಖರೀದಿಗೆ ಬಂದ ಅನುದಾನ ಪುಸ್ತಕ ಅಂಗಡಿ ಮಾಲೀಕರ ಜತೆಸೇರಿ ದುರ್ಬಳಕೆ ಮಾಡಿಕೊಂಡಿದ್ದಾರೆ ಇದಲ್ಲದೆ ಹಲವು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಪಿಡಿಒ ಶಿವಕುಮಾರ ನಡೆಸಿದ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಬಸವರಾಜ ಸೂರಿ, ಬಸವರಾಜ ಜಗ್ಲಿ, ರಮೇಶ ಇಡಿಚೇಡಿ, ಹುಲಿಗೇಶ, ಶ್ಯಾಮ್‌ಸುಂದರ್, ಹನುಮಂತ ಸಿಂಗ್ರಿ ಭೀಮೇಶಪ್ಪ ಇತರರಿದ್ದರು