ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಮಂಡ್ಯ: ಆ.23:– ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಸಚಿವರು, ಶಾಸಕರು, ಮುಖಂಡರ ವರ್ತನೆ ಖಂಡಿಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ನಗರದ ಸರ್.ಎಂ.ವಿ. ಪ್ರತಿಮೆ ಎದುರು ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.
ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ ಸಂವಿಧಾನಕ್ಕೆ ಅಗೌರವ ತರುವ ಕೆಲಸವನ್ನು ಕಾಂಗ್ರೆಸ್ ಮಾಡ್ತಾ ಇದೆ. ತಪ್ಪು ಮಾಡಿಲ್ಲ ಎಂದರೆ ಕೋರ್ಟ್ ನಲ್ಲಿ ಕೇಳಬೇಕು.ಅದನ್ನು ಬಿಟ್ಟು ಸಿಎಲ್‍ಪಿ ಮೀಟಿಂಗ್ ಮಾಡಿದರೆ ಏನು ಪ್ರಯೋಜನ ಇಲ್ಲ ಎಂದರು.
ಕಾಂಗ್ರೆಸ್‍ನವರು ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ್ದಾರೆ. ದಲಿತರಿಗೆ ಮಾಡುತ್ತಿರುವ ಅವಮಾನ ಇದು. ಕಾಂಗ್ರೆಸ್ ಪಕ್ಷ ರಾಜ್ಯಪಾಲರಲ್ಲಿ ಕೂಡಲೇ ಕ್ಷಮೆ ಕೇಳಬೇಕೆಂದು. ಮುಡಾ ಹಗರಣದಲ್ಲಿ ಕೇವಲ 14 ನಿವೇಶನ ಅಲ್ಲ, ಸಾವಿರಾರು ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಲೂಟಿ ಹೊಡೆದಿದ್ದಾರೆ. ಇದರ ಹಿಂದೆ ಇರುವ ದೊಡ್ಡ ತಿಮಿಂಗಿಲಗಳು ಹೊರಬರಲು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಹಗರಣದಲ್ಲಿ ಸಿಲುಕಿದಾಗ ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾತಿ ನೆನಪಾಗುತ್ತದೆ. ಇವರು 14 ಸೈಟು ನುಂಗಿದ ಕೂಡಲೇ ಹಿಂಬಾಲಕರು ನೂರಾರು ಸೈಟುಗಳನ್ನು ನುಂಗಿದ್ದಾರೆ. ಇವರದ್ದೇ ಹಿಂಬಾಲಕರಾದ ಮರಿಗೌಡರೇ ಪತ್ರ ಬರೆದು ಅಕ್ರಮವಾಗಿದೆ ಎಂದು ಹೇಳಿದ್ದರು. ಅದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಆರ್‍ಟಿಐ ಮೂಲಕ ಹೊರತೆಗೆದಾಗ ಎಲ್ಲವೂ ಬಯಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಒಂದೂ ಸೈಟು ಅಕ್ರಮವಾಗಿ ಪಡೆದಿಲ್ಲ ಎಂದು ಹೇಳಿದ್ದಾರೆ ಎಂದರು.
ಈಗ ವೈಟ್‍ನರ್ ಅಕ್ರಮ ಬಯಲಾಗಿದೆ. ದಾಖಲೆಗಳಲ್ಲಿ ವೈಟ್‍ನರ್ ಹಾಕಿ ಕೆಲವು ಅಂಶಗಳನ್ನು ಮರೆಮಾಚಲಾಗಿದೆ. ಏನಾದರೂ ತಪ್ಪಾದಾಗ ಅದರ ಮೇಲೆ ಪೆನ್‍ನಲ್ಲಿ ಗೆರೆ ಎಳೆದರೆ ಸಾಕಿತ್ತು. ಆದರೆ ವಿಷಯವನ್ನು ಮುಚ್ಚಿಹಾಕಲು ವೈಟ್‍ನರ್ ಬಳಸಿದ್ದಾರೆ. ವಿಜಯನಗರದಲ್ಲೇ ನಿವೇಶನ ಬೇಕು ಎಂದು ಸಿಎಂ ಪತ್ನಿ ಬರೆದಿದ್ದಾರೆ. ಅದಕ್ಕೆ ವೈಟ್‍ನರ್ ಹಚ್ಚಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದಾಖಲೆ ತಿದ್ದಿದ್ದಾರೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಅಶೋಕ್ ಜಯರಾಂ,ಎಸ್.ಪಿ.ಸ್ವಾಮಿ, ಕೆ.ಎಸ್.ನಂಜುಂಡೇಗೌಡ, ಹೆಚ್. ಆರ್.ಅಶೋಕ್, ಪೀಹಳ್ಳಿ ರಮೇಶ್, ಶ್ರೀಧರ್,ಸೇರಿದಂತೆ ಮತ್ತಿತರರಿದ್ದರು