ಸುತ್ತೂರಿನಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟ
ಸಂಜೆವಾಣಿ ವಾರ್ತೆ
ಸುತ್ತೂರು: ಆ.23:– ನಂಜನಗೂಡು ತಾಲ್ಲೂಕು ಸುತ್ತೂರಿನ ಜೆ.ಎಸ್.ಎಸ್. ಕ್ರೀಡಾಂಗಣದಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟ ನಡೆಯಿತು.
ಈ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಮಹೇಶ್‍ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಷ್ಟೆ ಕ್ರೀಡೆಯೂ ಮಹತ್ವದ್ದಾಗಿದೆ, ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಂಡಿರುವುದು ಸಂತಸದ ವಿಚಾರವಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಎಂಬುದು ಮುಖ್ಯವಲ್ಲ, ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳುವುದು ಮುಖ್ಯವಾಗಿದೆ, ಇಂದು ಸೋತರೂ ಅದೇ ಗೆಲುವಿನ ಮೆಟ್ಟಲು ಎಂದು ತಿಳಿದು ವಿದ್ಯಾರ್ಥಿಗಳು ಸ್ಪರ್ಧಿಸಬೇಕು ಎಂದು ತಿಳಿಸಿದರಲ್ಲದೇ ನಮ್ಮ ತಾಲ್ಲೂಕಿನಲ್ಲಿ ಈ ತಿಂಗಳ 19ರಿಂದಲೇ ಕ್ರೀಡಾಕೂಟ ಆರಂಭಗೊಂಡಿದ್ದು, ಎಲ್ಲಾ ಶಾಲೆಗಳ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ಈ ಕ್ರೀಡಾಕೂಟದಲ್ಲಿ ಸುತ್ತೂರಿನ ಜೆ.ಎಸ್.ಎಸ್. ಪ್ರಾಥಮಿಕ ಶಾಲೆಯ ಬಾಲಕರ ಕಬ್ಬಡ್ಡಿ ತಂಡವು ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ತನ್ನದಾಗಿಸಿಕೊಂಡಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಮಹೇಶ್‍ರವರು ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟದ ಸಂಚಾಲಕರಾದ ಬಸವನಾಯಕ, ಕ್ರೀಡಾ ಉಸ್ತುವಾರಿಗಳಾದ ಅಜೀಜ್‍ಖಾನ್, ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಗಿರೀಶ್, ಸುತ್ತೂರು ಶಾಲೆಯ ಮುಖ್ಯಶಿಕ್ಷಕ ನಾಗರಾಜು, ಜೆ.ಎಸ್.ಎಸ್. ಶಾಲೆಯ ಮುಖ್ಯ ಶಿಕ್ಷಕರಾದ ಷಡಕ್ಷರಿ, ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರುಗಳು, ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.