ಗಡಿ ಭಾಗದ ತಮಿಳು ಶಾಲೆಯ ಶ್ವೇತಾ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.23-ಚಾಮರಾಜನಗರ ತಾಲೂಕಿನಗಡಿ ಭಾಗದಲ್ಲಿರುವ ಚಿಕ್ಕಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ತಮಿಳು ಶಾಲೆಯಲ್ಲಿಕನ್ನಡ ಶಿಕ್ಷಕಿಯಾಗಿ 14 ವರ್ಷಗಳಿಂದ ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿರುವ ಚಾಮರಾಜನಗರದ ಶ್ವೇತಾ. ಬಿ.ಎನ್. ಅವರನ್ನು ಮಂಡ್ಯ ಜಿಲ್ಲೆಯ ಜಿ.ವಿ.ಕೆ. ಪ್ರತಿಷ್ಠಾನವು ಉತ್ತಮ ಶಿಕ್ಷಕಿ ಎಂದು ಗುರುತಿಸಿ ಸನ್ಮಾನಿಸಲು ತೀರ್ಮಾನಿಸಿದೆ.
ಜಿ.ವಿ.ಕೆ. ಪ್ರತಿಷ್ಠಾನ ತನ್ನ 9ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ ಆ.24 ರಂದು ಬೆಳಿಗ್ಗೆ 11 ಗಂಟೆಗೆ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಆವರಣದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲು ಮುಂದಾಗಿದೆ.
ಚಿಕ್ಕಹೊಳೆ ತಮಿಳು ಶಾಲೆಯಲ್ಲಿ ಹೆಚ್ಚಿನ ಮಕ್ಕಳು ತಮಿಳಿಗರಾಗಿದ್ದರೂ ಶ್ವೇತಾ ಅವರು ಸತತ 14 ವರ್ಷಗಳ ಕಾಲ ಮಕ್ಕಳಿಗೆ ಕನ್ನಡವನ್ನು ಕಲಿಸುವ ಮೂಲಕ ಕನ್ನಡ ಮಾತೃ ಭಾಷೆಗೆ ಹೆಚ್ಚು ಒತ್ತು ನೀಡಿ ಈ ಭಾಗದಲ್ಲಿ ಜನಪ್ರಿಯರಾಗಿದ್ದಾರೆ, ಇವರು ಎರಡು ಬಾರಿ ತಾಲೂಕು ಮಟ್ಟದಲ್ಲಿ ಉತ್ತಮ ಶಿಕ್ಷಕಿಯಾಗಿ ಪ್ರಶಸ್ತಿಗೆ ಭಾಜನರಾಗಿದ್ದರು. ಇವರಲ್ಲಿ ಕನ್ನಡ ಕಲಿತ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ, ಇಂಜನೀಯರಿಂಗ್ ಹಾಗೂ ಕನ್ನಡದಲ್ಲಿ ಪದವಿ ಪಡೆದಿರುತ್ತಾರೆ.
ಅಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರೂ ಹಾಗೂ ಕನ್ನಡರಾಜ್ಯೋತ್ಸವ ಪ್ರಶಸ್ತಿ ವಿಜೇತ ಆರ್.ವಾಸು ವಹಿಸಲಿದ್ದು, ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಉದ್ಘಾಟನೆ ಮಾಡಲಿದ್ದಾರೆ.