25ರಂದು ರಾಜೇಂದ್ರ ಶ್ರೀಗಳ 109ನೇ ಜಯಂತಿ
ಸಂಜೆವಾಣಿ ನ್ಯೂಸ್
ಮೈಸೂರು: ಆ.23:- ಸುತ್ತೂರು ಜಗದ್ಗುರು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠದ 23ನೇ ಪೀಠಾಧಿಪತಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತಿಯನ್ನು ಆ.25ರಂದು ಆಚರಿಸಲಾಗುತ್ತಿದೆ ಎಂದು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11.30ಕ್ಕೆ ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಸಿದ್ದಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿ ಸಾನಿಧ್ಯ ವಹಿಸುವರು. ಮುದ್ದೇನಹಳ್ಳಿ ಸತ್ಯಸಾಯಿ ಆಶ್ರಮದ ಸದ್ಗುರು ಮಧುಸೂದನ ಸಾಯಿಯವರ ಸಮ್ಮುಖದಲ್ಲಿ ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ನಿವೃತ್ತರಿಗೆ ಅಭಿನಂದನೆ:
ಮಧ್ಯಾಹ್ನ 3 ಗಂಟೆಗೆ ಜೆಎಸ್‍ಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಬಾರಿ ಸುಮಾರು 102 ಮಂದಿ ನಿವೃತ್ತರಾಗಿದ್ದಾರೆ. 63 ಮಂದಿ ಕೆಲಸದಿಂದ ಬಿಡುಗಡೆ ಪಡೆದಿದ್ದಾರೆ. 12 ಮಂದಿ ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದು ಅವರ ಕುಟುಂಬದವಿಗೆ ಸಾಂತ್ವನ ಹೇಳಿ, ನಿವೃತ್ತರಾದವರನ್ನು ಅಭಿನಂದಿಸಲಾಗುತ್ತದೆ. ಜತೆಗೆ ಜೆಎಸ್‍ಎಸ್ ವಿದ್ಯಾಸಂಸ್ಥೆಗಳಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ ಎಂದರು.
ಜೆಎಸ್‍ಎಸ್ ಶಾಲಾ ಕಾಲೇಜುಗಳ ಉತ್ತಮ ವಾರ್ಷಿಕ ಸಂಚಿಕೆಗಳಿಗೆ ಹಾಗೂ ಪ್ರಸಾದ ಮಾಸಿಕ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತರಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ತಿಳಿಸಿದರು.
ಮೃಗಾಲಯಕ್ಕೆ 1 ಲಕ್ಷ: ಶ್ರೀಗಳ ಜಯಂತಿಯ ದಿನ ಮೃಗಾಲಯದ ಪ್ರಾಣಿ, ಪಕ್ಷಿಸಂಕುಲಕ್ಕೆ ಆಹಾರ ವಿತರಣೆ ಮಾಡಲು ಪ್ರತಿ ವರ್ಷದಂತೆ ಈ ವರ್ಷವೂ ಒಂದು ಲಕ್ಷ ರೂ.ಗಳ ಚೆಕ್ ನೀಡಲಾಗುತ್ತದೆ. ಜತೆಗೆ ರಕ್ತದಾನ, ನೇತ್ರದಾನ ಹಾಗೂ ದೇಹದಾನಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗುತ್ತದೆ ಎಂದರು.
ಜೆಎಸ್‍ಎಸ್ ಗ್ರಂಥಮಾಲೆಯ ಪ್ರಕಟಣೆಗಳಿಗೆ ಆ.25ರಿಂದ ಸೆ.30ರವರೆಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರತಿ ವರ್ಷದಂತೆ ಜೆಎಸ್‍ಎಸ್ ಮಹಾವಿದ್ಯಾಪೀಠದ ಎಲ್ಲ ಅಂಗಸಂಸ್ಥೆಗಳು, ವಿವಿಧ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ವಿವಿಧೆಡೆಗಳಲ್ಲಿ ಜಯಂತಿ ಮಹೋತ್ಸವ ಆಚರಿಸಲಾಗುತ್ತದೆ. ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ರೋಗಿಗಳಿಗೆ ಹಣ್ಣುಹಂಪಲು ವಿತರಣೆ, ಶಾಲಾ ಕಾಲೇಜುಗಳಲ್ಲಿ ಸಸಿ ನೆಡುವುದು, ವಿಚಾರಸಂಕಿರಣ, ಕ್ರೀಡಾಕೂಟ ಆಯೋಜನೆ, ಪುಸ್ತಕಗಳು, ನೋಟ್‍ಪುಸ್ತಕಗಳು, ಶಾಲಾ ಬ್ಯಾಗ್‍ಗಳು, ಸಮವಸ್ತ್ರಗಳನ್ನು ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ.
14ನೇ ವಿಶೇಷ ಉಪನ್ಯಾಸ:
ಜೆಎಸ್‍ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ 14ನೇ ಉಪನ್ಯಾಸ ಕಾರ್ಯಕ್ರಮವನ್ನು ಆ.24ರಂದು ಸಂಜೆ 4 ಗಂಟೆಗೆ ಜೆಎಸ್‍ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮುದ್ದೇನಹಳ್ಳಿ ಸತ್ಯಸಾಯಿ ಆಶ್ರಮದ ಸದ್ಗುರು ಮಧುಸೂದನ ಸಾಯಿ ಅವರು ಆತ್ಮಾನೋ ಕೋಕ್ಷಾರ್ಥಂ ಜಗತ್ ಹಿತಾಯ ಚ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಇನ್ಫೋಸಿಸ್ ಪ್ರತಿಷ್ಠಾನದ ಡಾ.ಸುಧಾಮೂರ್ತಿಯವರ ದಾನಶೀಲತೆ ಅಗತ್ಯವೇ ಕೃತಿಯ ಅನುವಾದ ಈಸ್ ಚಾರಿಟಿ ಎಸೆನ್ಸಿಯಲ್ ಕೃತಿ, ತಮಿಳುನಾಡಿನ ರಾಜ್ಯಪಾಲ ತಿರು ಆರ್.ಎನ್.ರವಿ ಅವರ ಲೀಡರ್ಶಿಪ್ ಆಫ್ ಜಿ20 ಆಪರ್ಚುನಿಟೀಸ್ ಫಾರ್ ಭಾರತ್ ಹಾಗೂ ಅಂತಾರಾಷ್ಟ್ರೀಯ ವೃತ್ತಿಪರ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷರಾಗಿದ್ದ ಅನೂಪ್ ಎನ್.ಮೆಹ್ತಾ ಅವರ ಟುಮಾರೋಸ್ ಇಂಡಿಯಾ ಬಿಗಿನ್ಸ್ ಟುಡೇ ಲೆವರೇಜಿಂಗ್ ಅಕೌಂಟಬಿಲಿಟಿ ಫಾರ್ ಇಎಸ್ ಜಿ ಕೃತಿಗಳನ್ನು ವಿಶ್ರಾಂತ ಕುಲಪತಿ ಪೆÇ್ರ.ಜೆ.ಶಶಿಧರ ಪ್ರಸಾದ್ ಲೋಕಾರ್ಪಣೆ ಮಾಡಲಿದ್ದು, ಪ್ರಾದೇಶಿಕ ಆಯುಕ್ತ ಡಿ.ಎಸ್.ರಮೇಶ್ ಅಧ್ಯಕ್ಷತೆ ವಹಿಸುವರು ಎಂದು ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.
ಗೋಷ್ಠಿಯಲ್ಲಿ ಜೆಎಸ್‍ಎಸ್ ಮಹಾವೀದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಪ್ರಕಟಣ ವಿಭಾಗದ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ, ಕಾನೂನು ಕಾಲೇಜಿನ ಕಾರ್ಯನಿರ್ವಾಹಕ ಪೆÇ್ರ.ಕೆ.ಎಸ್.ಸುರೇಶ್ ಇದ್ದರು.