ಬೃಹತ್ ಉದೋಗ ಮೇಳ ಪೂರ್ವಭಾವಿ ತಯಾರಿಗೆ ಡಿಸಿ ಸೂಚನೆ
ಕೋಲಾರ,ಆ,೨೩- ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲು ಅಗತ್ಯವಾದ ಪೂರ್ವಭಾವಿ ತಯಾರಿ ಕಾರ್ಯಕ್ರಮ ಕೈಗೊಳ್ಳುವಂತೆ ಹಾಗೂ ಕೌಶಲ್ಯಾಭಿವೃದ್ಧಿ ಯೋಜನೆ ಜಾರಿ ಸಂಬಂಧ ಜಾರಿಗೊಳಿಸಲಾದ ಎಲ್ಲಾ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಪ್ರಗತಿಯನ್ನು ರಾಜ್ಯದ ಪ್ರಗತಿಯೊಂದಿಗೆ ಹೋಲಿಸಿ ತುಲಾನಾತ್ಮಕ ವರದಿಯನ್ನು ಜಿಲ್ಲಾ ಕೌಶಲ್ಯ ಮಿಷನ್ ಸಭೆಯಲ್ಲಿ ಮಂಡಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷ ಅಕ್ರಂ ಪಾಷಾರವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ಕೌಶಲ್ಯ ಸಮಿತಿ ಸದಸ್ಯರೊಂದಿಗೆ ಇಲಾಖೆಯ ಯೋಜನಾ ನಿರೂಪಣೆ, ಉಸ್ತುವಾರಿ ಹಾಗೂ ಅನುಷ್ಥಾನ ಕಾರ್ಯಗಳನ್ನು ಕುರಿತು ಪ್ರಗತಿ ಪರಿಶೀಲನೆ ನಿರ್ವಹಿಸಿ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಚುರುಕುಗೊಳಿಸಲು ಹಲವು ಸಲಹೆ ಸೂಚನೆಗಳನ್ನು ನೀಡಿದ ಅವರು ಯೋಜನೆಗಳ ಯಶಸ್ವಿ ಅನುಷ್ಥಾನಕ್ಕೆ ಅಂತರ್ ಇಲಾಖಾ ಸಮನ್ವಯ ಅಗತ್ಯವೆಂದು ಅಭಿಪ್ರಾಯ ಪಟ್ಟರು.
ಕೈಗಾರಿಕಾ ಉಪ ಸಮಿತಿ ಅಧ್ಯಕ್ಷರಾದ ಜಂಟಿ ನಿರ್ದೇಶಕರಿಗೆ ಜಿಲ್ಲೆಯ ಕೈಗಾರಿಕೆಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲದ ಸರ್ವೇಕ್ಷಣೆ ಮಾಡುವಂತೆ ಹಾಗೂ ಜಿ.ಪಿ.ಡಿ.ಪಿ ಯೋಜನೆ ತಯಾರಿಸುವಾಗ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಸೇರ್ಪಡೆಗೊಳಿಸುವಂತೆ ಸೂಚಿಸಿದರು.
ಕೆನರಾಬ್ಯಾಂಕ್ ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಹಾಗೂ ಸಿಡಾಕ್ ಸಂಸ್ಧೆಗಳ ವತಿಯಿಂದ ಆಯೋಜಿಸ ಲಾಗುವ ಸ್ವಯಂ ಉದ್ಯೋಗ ಕಾರ್ಯ ಕ್ರಮಗಳ ಫಲಶ್ರುತಿಗಳ ಬಗ್ಗೆ ಯಶೋಗಾಥೆಯನ್ನು ಸಂದರ್ಶನ ಮಾಡಿ ಪ್ರಚಾರ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಕೃಷಿ ಸಂಬಂಧಿತ ವಿವಿಧ ಕೌಶಲ್ಯ ತರಬೇತಿಗಳನ್ನು ಪಟ್ಟಿ ಮಾಡಿ ಅನುಷ್ಥಾನ ಮಾಡುವಂತೆ ಕೃಷಿ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಸಮಾಜ ಕಲ್ಯಾಣ, ಹಿದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಇಲಾಖಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೃದು ಕೌಶಲ್ಯ ಹಾಗೂ ಸ್ಪೋಕನ್ ಇಂಗ್ಲೀಷ್ ತರಬೇತಿ ಆಯೋಜಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿನ ಕೌಶಲ್ಯ ಕೊರತೆ ಹಾಗೂ ಬೇಡಿಕೆಯ ಮಾನವ ಸಂಪನ್ಮೂಲದ ಕುರಿತು ಪರಿಪೂರ್ಣ ವರದಿ ಸಲ್ಲಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ತರಬೇತಿ ಪ್ರಗತಿ ಕುರಿತು ತರಬೇತಿ ಕೇಂದ್ರಗಳ ಮುಖ್ಯಸ್ಧರಿಂದ ಮಾಹಿತಿ ಪಡೆದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಫಲ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಲು ಅಗತ್ಯ ಕ್ರಮವಹಿಸಲು ಸೂಚಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಥಾಧಿಕಾರಿ ನಿಖಿಲ್‌ರವರು ಜಿಲ್ಲೆಯಲ್ಲಿ ಕೌಶಲ್ಯ ಯುಕ್ತ ಪರಿಸರ ನಿರ್ಮಿಸಲು ಎಲ್ಲಾ ಸಂಬಂಧಿಸಿದ ಭಾಗೀದಾರರು ಸಮನ್ವಯ ಸಾಧಿಸುವಂತೆ ಸೂಚಿಸಿದರು.
ಸಭೆಗೆ ಕೌಶಲ್ಯಾಭಿವೃದ್ಧಿ ಇಲಾಖೆಯ ಎಲ್ಲಾ ಮಾಹಿತಿ ಒದಗಿಸಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ. ಶ್ರೀನಿವಾಸ್ ಕೈಗಾರಿಕಾ ತರಬೇತಿ ಸಂಸ್ಧೆಗಳು ಜಿ.ಟಿ.ಟಿ.ಸಿ ಸಿಡಾಕ್ ಸಂಸ್ಧೆಗಳ ಪ್ರಗತಿ ಸಿ.ಎಂ.ಕೆ.ಕೆ.ವೈ ಯೋಜನೆಯ ಪ್ರಗತಿ ಉದ್ಯೋಗ ಮೇಳ ಶಿಶಿಕ್ಷು ಮೇಳ ಪಿ.ಎಂ. ವಿಶ್ವಕರ್ಮ ಯೋಜನೆ ಯುವನಿಧಿ ಯೋಜನೆ, ಕೈಗಾರಿಕಾ ಬೇಡಿಕೆ ಸಮೀಕ್ಷೆ ಹಾಗೂ ಕೌಶಲ್ಯಾಭಿವೃದ್ಧಿ ನಿಗಮದ ನೂತನ ಯೋಜನೆಗಳ ಕುರಿತು ಮಾಹಿತಿ ಒದಗಿಸಿದರು.
ಸಭೆಯಲ್ಲಿ ಸಂಬಂಧಿಸಿದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿ.ಎಂ.ಕೆ.ಕೆ.ವೈ ಹಾಗೂ ಪಿ.ಎಂ.ಕೆ.ವಿ.ವೈ ಕೇಂದ್ರಗಳ ಮುಖ್ಯಸ್ಧರು ಹಾಗೂ ವಿವಿಧ ಶೈಕ್ಷಣಿಕ ಸಂಸ್ಧೆಗಳ ಮುಖ್ಯಸ್ಧರು ಉಪಸ್ಧಿತರಿದ್ದರು.