ದುರ್ಯೋಧನನಂತೆ ಹಾಳಾಗದೆ ಸರಿಪಡಿಸಿಕೊಳ್ಳಿ
ಸಂಜೆವಾಣಿ ನ್ಯೂಸ್
ಮೈಸೂರು: ಆ.23:- ಸಿಎಂ ಸಿದ್ದರಾಮಯ್ಯ ಅವರು ದುರಂಹಕಾರ ಬಿಡದ ದುರ್ಯೋಧನನಂತೆ ನೀವು ಹಾಳಾಗುವುದನ್ನು ನಾವು ಸಹಿಸುವುದಿಲ್ಲ, ನೀವು ಸರಿಪಡಿಸಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಲಹೆ ನೀಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ನೋಟಿಸ್ ಕೊಟ್ಟು ನಿಮಗೊಂದು ಅವಕಾಶ ನೀಡಿದ್ದರು. ಅದನ್ನು ಯಾಕೆ ದೊಡ್ಡದು ಮಾಡಿ, ಎಲ್ಲಾ ಹಾಳು ಮಾಡಿಕೊಂಡಿರಿ? ನಿಮಗೆ ನೀಡಿದ ನೋಟಿಸ್‍ಗೆ ನೀವು ಖುದ್ದು ಭೇಟಿಯಾಗಿ ಲಿಖಿತ ಉತ್ತರ ನೀಡಿ, ಮನವರಿಕೆ ಮಾಡಿಕೊಡಬೇಕಿತ್ತು. ಅದು ಬಿಟ್ಟು ನಿಮ್ಮ ವಿಷಯವನ್ನು ಸರ್ಕಾರಕ್ಕೆ ಕೊಂಡೊಯ್ದು ಸಚಿವ ಸಂಪುಟದ ಮುಂದಿಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು.
ನಿಮ್ಮ ಮುಖಕ್ಕೆ ಮಸಿ ಬಳಿಯುತ್ತಿರುವವರು ಜೆಡಿಎಸ್ ಅಥವಾ ಬಿಜೆಪಿಯವರಲ್ಲ. ಬದಲಿಗೆ ನಿಮ್ಮ ಪಕ್ಷದ ಸಚಿವರು, ಶಾಸಕರು. ನಿಮಗೆ ಯಾರು ಜಿಂದಾಬಾದ್ ಎಂದು ಹೇಳುತ್ತಾರೋ ಅವರೇ ಮಸಿ ಬಳಿಯುತ್ತಿದ್ದಾರೆ ಎಂದು ದೂರಿದರು.
ನಿಮ್ಮ ಮೇಲೆ ಆರೋಪ ಬಂದ ಕೂಡಲೇ, ಹಗರಣ ನಡೆದಿರುವುದು ಸತ್ಯ ಎಂದು ಅರಿವಾದ ಕೂಡಲೇ ನಾನೇ ಸರಿ ಮಾಡುತ್ತೇನೆ ಎಂದು ತಾವು ಮುಂದಾಗಬೇಕಿತ್ತು. ತಮಗೆ ನೀಡಲಾದ ನಿವೇಶನ ತೆಗೆದುಕೊಳ್ಳಿ ಎಂದು ಹೇಳಬೇಕಿತ್ತು. ತಮ್ಮ ಪತ್ನಿಗೆ ಸೇರಿದ ಭೂಮಿಯಲ್ಲಿ ಏನಾದರೂ ಜಾಗ ಉಳಿದಿದ್ದರೆ ಅಲ್ಲಿ ಬುದ್ಧಿಮಾಂಧ್ಯರಿಗೆ ಒಂದು ಶಾಲೆ ನಿರ್ಮಿಸಿ ಎಂದು ಅವರು ಸಲಹೆ ನೀಡಿದರು.
ತಮಗೆ ನೀಡಿದ ನಿವೇಶನಕ್ಕೆ 62 ಕೋಟಿ ರೂ. ಪರಿಹಾರ ಕೇಳಿ ಆರೋಪಿಸುವವರಿಗೆ ತಾವು ಸುಲಭವಾದಿರಿ. ಮುಡಾ ಹಗರಣ ಸಂಬಂಧ ಪರ, ವಿರೋಧ ಆರೋಪ ನಡೆಯುತ್ತಿದೆ. ಜನ ಜೀವನ ಕಲುಷಿತಗೊಳ್ಳುತ್ತಿದೆ. ಕರ್ನಾಟಕದ ಪರಂಪರೆ ಕೆಡುತ್ತಿದೆ. ಗಂಧದ ಸುವಾಸನೆಯ ಬೀಡಿನಲ್ಲಿ ದುರ್ವಾಸನೆ ಬೀರುತ್ತಿದೆ. ಪಕ್ಷದ ಕಾರ್ಯಕರ್ತರು, ಶಾಸಕರು ರಾಜ್ಯಪಾಲರನ್ನು ಹೀಗಳೆಯುವುದು ಈ ನಾಡಿಗೆ ಗೌರವ ತರುವುದಿಲ್ಲ ಎಂದರು.
ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದೆ. ಸಿಎಂ ಮತ್ತು ಕೇಂದ್ರ ಪರಸ್ಪರ ನಿಂದನೆ ಮೆಚ್ಚುವಂತದಲ್ಲ. ಸಿದ್ದರಾಮಯ್ಯ-ಕುಮಾರಸ್ವಾಮಿ ನೀನು ಯಾರು ಬಂಧಿಸುತ್ತೇವೆ ಎಂಬುದು ಅಸಹ್ಯ. ಜನರ ಗೇಲಿಗೆ ಒಳಗಾಗುತ್ತಿದ್ದೀರಿ ಎಂದು ಹೇಳಿದರು.
ನಿಮ್ಮ ಮೂಗಿನ ಅಡಿಯಲ್ಲಿಯೇ ಮುಡಾ ವಾಸನೆ ಹೆಚ್ಚಾಗುತ್ತಿದೆ. ಹೆಲಿಕಾಪ್ಟರ್‍ನಲ್ಲಿ ಬಂದು ಸಚಿವರು ಫೈಲ್ ತೆಗೆದುಕೊಂಡು ಹೋದರು. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದರು. ಇಲ್ಲಿಂದ ಕೊಂಡೊಯ್ದ ದಾಖಲೆಯನ್ನು ವೈಟ್ನರ್ ಹಾಕಿ ತಿದ್ದಿದ್ದೀರ? ಯಾವ ಕಾಲದಲ್ಲಿಯೂ ಹೀಗೆ ಆಗಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಚಿವರ ಮೇಲೆ ಕಳವು ಕೇಸ್ ಹಾಕಬೇಕಿತ್ತು. ಸರ್ಕಾರ ಒಂದು ಪ್ರಕರಣ ದಾಖಲಿಸಲೂ ಇಲ್ಲ. ಇತ್ತ ರಾಜಭವನದ ಒಳಗೆ ನುಗ್ಗಿ ಆಚೆ ಹಾಕಬೇಕಾಗುತ್ತದೆ ಎಂಬ ಮೇಲ್ಮನೆ ಸದಸ್ಯನ ಮಾತು ಸರಿಯೇ? ಹಾಗೆ ಹೇಳಿದರೆ ಹೇಗೆ? ಇದೊಂದು ಗೂಂಡಾ ರಾಜ್ಯವೇ? ನೀವು ಕರ್ನಾಟಕದ ಮುಖ್ಯಮಂತ್ರಿ. ರಾಜ್ಯಪಾಲರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೀರಾ? ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದವರಾ ನೀವು? ಯಾರು ಸಹಿಸುವುದಿಲ್ಲ ಇದನ್ನು ಎಂದು ಕಟುವಾಗಿ ಟೀಕಿಸಿದರು.
ಮೈಸೂರಿನಲ್ಲಿ ಕಾನೂನೇ ಇಲ್ಲ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಾನೂನು ಇಲ್ಲ, ಪ್ರಜಾಪ್ರಭುತ್ವವೂ ಇಲ್ಲ. ಮುಡಾ ನಿವೇಶನ ಪಡೆದ ಸಚಿವರು, ಶಾಸಕರು, ಅವರ ಬಂಧುಗಳು ಆರಾಮವಾಗಿ ಮನೆ ಕಟ್ಟುತ್ತಿದ್ದಾರೆ. ಮುಡಾದ ಕಡತಗಳಿರುವ ಕೊಠಡಿಗೆ ಯಾರನ್ನೂ ಬಿಡದೆ ಮೂವರು ವ್ಯಕ್ತಿಗಳು ಮಾತ್ರ ಕುಳಿತು ವೈಟ್ನರ್ ಹಾಕಿ ಎಲ್ಲವನ್ನೂ ತಿದ್ದುತ್ತಿದ್ದಾರೆ ಎಂದು ಆರೋಪಿಸಿದರು.
ಇಬ್ಬರು ಆಯುಕ್ತರು ಆರಾಮವಾಗಿ ತಿರುಗಾಡಿಕೊಂಡಿದ್ದಾರೆ. ಜನರಿಗೆ ಏನಾಗಿದೆ ಎಂಬುದು ಗೊತ್ತಿದೆ. ಲೋಕಾಯುಕ್ತರು ಈ ಪ್ರಕರಣದಲ್ಲಿ ಸುಮೋಟೋ ಪ್ರಕರಣ ದಾಖಲಿಸಬಹುದಿತ್ತು. ಅಲ್ಲಿಯೂ ಏನು ಮಾಡುತ್ತಿಲ್ಲ. ಸರ್ಕಾರ ನೇಮಿಸಿದ ಕೆಂಪಣ್ಣ ಆಯೋಗ, ನ್ಯಾಯಾಂಗ ತನಿಖೆ ಏನಾಗಿದೆ ಎಂದು ಪ್ರಶ್ನಿಸಿದರು.
ಎಚ್.ಡಿ.ಕೆಗೂ ಅನುಮತಿ ನೀಡಲಿ:
ಸಿದ್ದರಾಮಯ್ಯ ಪ್ರಕರಣ ತನಿಖೆ ಹಂತದಲ್ಲಿದೆ. ಆದರೆ ತನಿಖಾ ವರದಿ ಬಂದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ಅವರ ವಿರುದ್ಧದ ಪ್ರಕರಣದಲ್ಲಿಯೂ ರಾಜ್ಯಪಾಲರು ಪಾಸಿಕ್ಯೂಷನ್‍ಗೆ ಅನುಮತಿ ನೀಡಬೇಕು. ಕಾನೂನು ಎಲ್ಲರಿಗೂ ಒಂದೆ ಅಲ್ಲವೇ ಎಂದರು.
ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ನಡೆಯುವ ಗಜಪಯಣ ಆರಂಭಿಸಿದ್ದು ನಾವು. ಅದನ್ನು ವೈಭವಯುತವಾಗಿ ನಾಡಿಗೆ ತೋರಿಸಬೇಕಿತ್ತು. ಆನೆಗಳನ್ನು ನಡೆಸಿಕೊಂಡು ಬಂದಿದ್ದರೆ ಅದರ ಸೊಬಗು ತಿಳಿಯುತ್ತಿತ್ತು. ಸುಪ್ರಿಂ ಕೋರ್ಟ್ ಆದೇಶದಂತೆ ದಿನಕ್ಕೆ 30 ಕಿ.ಮೀ ಮಾತ್ರ ನಡೆಸಬೇಕು ಎಂದಿದೆ. ಆದರೆ ದಿನಕ್ಕೆ 20 ಕಿ.ಮೀ. ನಂತೆ ಮೂರು ದಿನ ನಡೆಸಿಕೊಂಡು ಬರಲಿ ಬಿಡಿ ಎಂದರು.