ಪಿಯು ಕಾಲೇಜ್: ಜ್ಞಾನ ವಿಕಾಸ ಅಭಿಯಾನ
ಕೋಲಾರ,ಆ,೨೩- ಪಠ್ಯ ಪುಸ್ತಕಗಳನ್ನು ಓದುವುದರಿಂದ ಪರೀಕ್ಷೆಯಲ್ಲಿ ಅಂಕ ಗಳಿಸಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದೇ ಹೊರತು ಹೆಚ್ಚಿನ ಜ್ಞಾನಾರ್ಜನೆ ಪಡೆಯಲು ಅವಕಾಶ ಸಿಗುವುದಿಲ್ಲ, ಆದರೆ ಮೌಲ್ಯಯುತ ಬದುಕಿಗೆ, ಜ್ಞಾನ ವಿಕಾಸಕ್ಕೆ ಸಂಬಂಧಪಟ್ಟ ವಿಷಯ ಆಧಾರಿತ ಕೃತಿಗಳನ್ನು ಓದುವುದರಿಂದ ಸಮಾಜದಲ್ಲಿನ ಅಂಕು-ಡೊಂಕು ತಿಳಿದುಕೊಂಡು ಸಮ ಸಮಾಜ ನಿರ್ಮಾಣಕ್ಕೆ ದಾರಿ ಕೊಂಡುಕೊಳ್ಳಬಹುದೆ೦ದು ಹಿರಿಯ ಪತ್ರಕರ್ತ, ಲೇಖಕ ವಿಶ್ವ ಕುಂದಾಪುರ ತಿಳಿಸಿದರು.
ಕೋಲಾರ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜಿನಲ್ಲಿ ಬುಧವಾರ ಮನ್ವಂತರ ಪ್ರಕಾಶನದಿಂದ ಹಮ್ಮಿಕೊಂಡಿದ್ದ “ಜ್ಞಾನ ವಿಕಾಸ” ಅಭಿಯಾನ ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಪಠ್ಯ ಪುಸ್ತಕಗಳ ಜೊತೆಗೆ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿರುವ ಮಹನೀಯರ ಜೀವನ ಚಿರಿತ್ರೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ನಮ್ಮನ್ನು ದಾಸ್ಯದಿಂದ ಮುಕ್ತಿಗೊಳಿಸಿರುವ ನಮ್ಮ ಪೂರ್ವಿಕರನ್ನು ಪರಿಚಯ ಮಾಡಿಕೊಳ್ಳಲು ಪುಸ್ತಕ ಮಳಿಗೆ, ಗ್ರಂಥಾಲಯಗಳಲ್ಲಿ ಸಿಗುವ ಉಪಯುಕ್ತವಾದ ಪುಸ್ತಕಗಳನ್ನು ಓದಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸ್ವಾತಂತ್ರ್ಯ ದೊರೆತ್ತಿದ್ದರಿಂದ ನಾವೆಲ್ಲಾ ಇಂದು ನೆಮ್ಮದಿಯಿಂದ ಬದುಕಲು ಅವಕಾಶ ಸಿಕ್ಕಿರಬಹುದು. ಆದರೆ ವಿವೇಚನೆ ಇಲ್ಲದೆ ಕೆಲವರು ಸಮಾಜಕ್ಕೆ ಕಂಟವನ್ನು ಉಂಟು ಮಾಡುತ್ತಿದ್ದಾರೆ, ಅತ್ಯಾಚಾರ, ಕೊಲೆ, ಸುಲಿಗೆ, ಅನಾಚಾರ, ಭ್ರಷ್ಟಾಚಾರ ತಾಂಡವವಾಡುತ್ತಿದೆ, ಸ್ವಾತಂತ್ರ್ಯ ಭಾರತದಲ್ಲಿ ಕಟ್ಟ ಜನರಿಂದ ವಿಮೋಚನೆ ಪಡೆಯಲು ಅನೇಕರು ಪರದಾಡುತ್ತಿದ್ದಾರೆ. ಇಂತಹ ವಿಷಯಗಳನ್ನು ತಿಳಿದು ಸಮಾಜದಲ್ಲಿ ಬದಲಾವಣೆ ತರುವ ಸಲುವಾಗಿ ವಿದ್ಯಾರ್ಥಿಗಳು ಜ್ಞಾನವಂತರಾಗಬೇಕು, ಇದಕ್ಕಾಗಿ ಹೆಚ್ಚು ಹೆಚ್ಚು ಆಧ್ಯಯನ ಮಾಡಬೇಕೆಂದು ಸಲಹೆ ನೀಡಿದರು.
ಜಗತ್ತು ಬದಲಾಗುತ್ತಿರುವುದರಿಂದ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡುವ ಅನಿವಾರ್ಯತೆ ಇದೆ. ಹಾಗಂತ, ತಂತ್ರಜ್ಞಾನದಿಂದಲೇ ಎಲ್ಲವೂ ಸಾಧಿಸಲಾಗದು, ವಿದ್ಯಾರ್ಥಿಗಳು ನಮ್ಮ ದೇಶದ ಇತಿಹಾಸ, ಚರಿತ್ರೆ, ಸಾಮಾಜಿಕ ಸ್ಥತಿ-ಗತಿ ಅರಿತು ಪರಿಜ್ಞಾನದ ಮೂಲಕ ಸಮಾಜವನ್ನು ತಿದ್ದಲು ದೊಡ್ಡ ದೊಡ್ಡ ಪುಸ್ತಕಗಳನ್ನು ಓದಬೇಕಾಗಿಲ್ಲ, ಚಿಕ್ಕ ಚಿಕ್ಕ ಲೇಖನಗಳನ್ನು ಒಳಗೊಂಡ ಪುಸ್ತಕಗಳನ್ನು ಹಾಗೂ ದೈನಂದಿನ ವಿಷಯಗಳನ್ನು ತಿಳಿಯಲು ದಿನ ಪತ್ರಿಕೆ, ನಿಯತಕಾಲಿಕೆ ಓದಿ ಎಂದು ಕೆಲವು ಸಣ್ಣ ಕೃತಿಗಳನ್ನು ಪರಿಚಯಿಸಿ ಅರಿವು ಮೂಡಿಸಿದರು,
ಮನ್ವಂತರ ಪ್ರಕಾಶನದ ಅಧ್ಯಕ್ಷ, ಹಿರಿಯ ಪತ್ರಕರ್ತ, ಪಾ,ಶ್ರೀ .ಅನಂತರಾಮ್ ಪ್ರಸ್ತಾವಿಕವಾಗಿ ಮಾತನಾಡಿ, ಜ್ಞಾನ ಎಂದರೆ ಬೆಳಕು, ಅಜ್ಞಾನದಿಂದ ಬೆಳಕಿನಡೆಗೆ ಸಮಾಜವನ್ನು ಕೊಂಡೊಯ್ಯಲು ಜ್ಞಾನ ವಿಕಾಸ ಅಭಿಯಾನವನ್ನು ಜಿಲ್ಲೆಯಾಧ್ಯಂತ ನಡೆಸಲಾಗುತ್ತಿದೆ, ಅತಿ ಶೀಘ್ರವೇ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಗುತ್ತದೆ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಗದು ಬಹುಮಾನ ಗೆಲ್ಲ;ಬೇಕೆಂದು ತಿಳಿಸಿದರು. ಮನ್ವಂತರ ಪ್ರಕಾಶನದ ಪರಿಸರ ವಿಭಾಗದ ಸಂಚಾ;ಕ ಎ.ಬಾಲನ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ತೇಜಸ್ವಿನಿ ಸೊಗಸಾಗಿ ನಿರೂಪಿಸಿ, ಮನ್ವಂತರ ಪ್ರಕಾಶನದ ಸಂಚಾಲಕ ಎಸ್.ಎನ್/ಪ್ರಕಾಶ್ ಸ್ವಾಗತಿಸಿ, ಬದರಿನಾಥ್ ವಂದಿಸಿದರು.