ಧೀಕ್ಷಾ ಭೂಮಿಗೆ ತೆರಳಲು ಅವಕಾಶ ಕಲ್ಪಿಸಿ
ಕೋಲಾರ,ಆ.೨೩: ಕಳೆದ ವರ್ಷ ಧೀಕ್ಷಾ ಭೂಮಿಗೆ ತೆರಳಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ತೆರಳದೆ ವಂಚಿತರಾಗಿರುವವರಿಗೆ ಈ ವರ್ಷ ಅಕ್ಟೋಬರ್‌ನಲ್ಲಿ ತೆರಳಲು ಅವಕಾಶ ಮಾಡಿಕೊಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕೂರು ವೆಂಕಟೇಶ್ ಮಾತನಾಡಿ, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಸುಮಾರು ೧೨೦ಕ್ಕೂ ಹೆಚ್ಚು ಜನ ನಾಗಪುರ್ ಧೀಕ್ಷಾ ಭೂಮಿಗೆ ತೆರಳಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರಿಗೆ ಬಸ್ಸುಗಳ ಸೌಕರ್ಯವಿಲ್ಲದೆ ದೊಡ್ಡಮಟ್ಟದಲ್ಲಿ ತೆರಳುವ ದಿನ ಹೋರಾಟ ಮಾಡಿ ರಾತ್ರಿ ೧೦ ಗಂಟೆಯವರೆಗೆ ಕಾದು ಸಮಾಜ ಕಲ್ಯಾಣ ಇಲಾಖೆಯು ಬಸ್ ಸೌಕರ್ಯ ಕಲ್ಪಿಸದ ಕಾರಣ ವಾಪಸ್ ಹೋಗಿರುತ್ತಾರೆ.
ದಿನಾಂಕ ೩೦-೧೦-೨೦೨೩ ಬೆಳಗ್ಗೆ ೧೦ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಹೋರಾಟ ಮಾಡಿದಾಗ ಕೊನೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್ ಬಂದು ಮನವಿ ಸ್ವೀಕರಿಸಿ ಮುಂದಿನ ವರ್ಷ ವಂಚಿತರಾದವರನ್ನು ಕಳುಹಿಸಿ ಕೊಡುವುದಾಗಿ ಮಾತು ಕೊಟ್ಟಿರುತ್ತಾರೆ
ಅದರಂತೆಯೆ ಈ ವರ್ಷ ೨೦೨೪ ಅಕ್ಟೋಬರ್ ತಿಂಗಳಲ್ಲಿ ನಾಗ್ಪುರ್ ಧೀಕ್ಷಾ ಭೂಮಿಗೆ ತೆರಳಲು ಕೊನೆಯ ವರ್ಷ ವಂಚಿತರಾದ ಎಲ್ಲಾ ಅರ್ಜಿದಾರರಿಗೂ ಮೊದಲ ಆದ್ಯತೆ ಕೊಟ್ಟು ಬಸ್ ಸೌಕರ್ಯ ಕಲ್ಪಿಸಿಕೊಡಬೇಕು ಮತ್ತು ಹೊಸ ಅರ್ಜಿದಾರರಿಗೂ ಬಸ್ ಸೌಕರ್ಯ ಕಲ್ಪಿಸಿಕೊಡಬೇಕೆಂದು ಈ ಮೂಲಕ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆ ಒತ್ತಾಯ ಮಾಡುತ್ತಿದೆ.
ನಿಯೋಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರುಗಳಾದ ಮುನೆಯ್ಯ, ಚಂದ್ರಕಲಾ, ಮಂಜುಳ, ಜ್ಯೋತಿ, ಎಂ.ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು.