500ಕ್ಕೂ ಹೆಚ್ಚು ಗಿಡಗಳ ಪೋಷಣೆ
ಕೋಲಾರ,ಆ.೨೩- ತಾಲ್ಲೂಕಿನ ಪಾರ್ಶ್ವಗಾನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಮಾಜಿ ಯೋಧ ಅಶ್ವಥ್ ರಾಮ್ ಮತ್ತು ಗ್ರಾಮದ ಹಿರಿಯರು ಸೇರಿ ಗ್ರಾಮದಲ್ಲಿ ಜನ್ಮದಿನ ಆಚರಣೆ ಮಾಡಿಕೊಳ್ಳುವ ಪರಿಸರ ಆಸಕ್ತಿ ಮತ್ತು ಕಾಳಜಿಯುಳ್ಳವರನ್ನ ಪತ್ತೆ ಮಾಡಿ ಗ್ರಾಮ ಪಂಚಾಯತಿ, ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ಎಫ್.ಪಿ.ಓ ಸೇರಿದಂತೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮದ ಹೊರವಲಯ ಹಾಗೂ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ೫೦೦ಕ್ಕೂ ಹೆಚ್ಚು ವಿವಿಧ ಹಣ್ಣಿನ ಗಿಡಗಳು, ಅಶೋಕ ಸಸಿಗಳು ಸೇರಿದಂತೆ ವಿವಿಧ ಸಸಿಗಳನ್ನ ನೆಟ್ಟು ಪೋಷಣೆ ಮಾಡಲಾಗುತ್ತಿದೆ.
ಅದೇ ರೀತಿ ಇಂದು ಪಾರ್ಶ್ವಗಾನಹಳ್ಳಿ ಕ್ರಾಸ್‌ನಿಂದ ಮಹಾದ್ವಾರದ ತನಕ ರಸ್ತೆ ಬದಿಯಲ್ಲಿ ಅಶೋಕ ಸಸಿಗಳನ್ನು ನೆಡಲಾಯಿತು.
ಗ್ರಾಮ ಪಂಚಾಯತಿ ಸದಸ್ಯ ಅಶ್ವಥ್ ರಾಮ್ ಅವರು ಮಾತನಾಡಿ ಅಭಿವೃದ್ಧಿ ಹೆಸರಲ್ಲಿ ಪರಿಸರವನ್ನು ನಾಶಪಡಿಸುತ್ತಿರುವ ಈ ದಿನಗಳಲ್ಲಿ ಗ್ರಾಮದ ಪರಿಸರ ಪ್ರೇಮಿಗಳ ತಂಡ ಗ್ರಾಮದಲ್ಲಿ ಹಾಗೂ ರಸ್ತೆ ಬದಿ ಸೇರಿದಂತೆ ಗ್ರಾಮದ ಸುತ್ತಮುತ್ತ ಗಿಡ ಮರಗಳನ್ನು ಬೆಳೆಸಿ ಗ್ರಾಮವನ್ನ ಹಚ್ಚ ಹಸಿರಾಗಿಸಿ ಜಿಲ್ಲೆಯಲ್ಲೇ ಮಾದರಿಯಾಗಿದ್ದೇವೆ.
ಕಳೆದ ೧೦ ವರ್ಷಗಳಿಂದ ೫೦೦ ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದೇವೆ. ಪ್ರತಿಯೊಬ್ಬರು ಗಿಡಗಳನ್ನು ಕಡಿಯುವ ಬಗ್ಗೆ ಯೋಚಿಸುವ ಬದಲಿಗೆ ಗಿಡಗಳನ್ನು ನೆಡುವ ಉದ್ದೇಶ ಇಟ್ಟುಕೊಳ್ಳಬೇಕು. ಪ್ರತಿ ಗ್ರಾಮದಲ್ಲೂ ಜನ್ಮದಿನ, ಮದುವೆ ವಾರ್ಷಿಕೋತ್ಸವ ವಿಶೇಷ ಸಂಧರ್ಭದಲ್ಲಿ ಸಸಿ ನೆಟ್ಟು ಪೋಷಣೆ ಮಾಡುವ ಜವಾಬ್ದಾರಿಯನ್ನ ಗ್ರಾಮದ ಜನರು ತೆಗೆದುಕೊಳ್ಳಬೇಕೆಂದರು.
ಅರಣ್ಯ ಅಧಿಕಾರಿ ಶಶಿಕುಮಾರ್, ಕೃಷಿ ಇಲಾಖೆ ಅಧಿಕಾರಿ ನವೀನ್, ಗ್ರಾಮದ ಹಿರಿಯ ಮುಖಂಡರಾದ ಶ್ರೀನಿವಾಸ ಮೂರ್ತಿ, ಶ್ರೀರಾಮಪ್ಪ, ಮುನಿನಾರಾಯಣಪ್ಪ, ರಾಮಣ್ಣ, ಜಲಗಾರ ಅಶ್ವಥಪ್ಪ, ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.