ಪೂಜ್ಯ ದೊಡ್ಡಪ್ಪ ಅಪ್ಪ ಅವರಿಂದ ಅಕ್ಷರ ಕ್ರಾಂತಿ
ಕಲಬುರಗಿ:ಆ.22:ಪೂಜ್ಯ ದೊಡ್ಡಪ್ಪ ಅಪ್ಪ ಅವರು ಅನ್ನದಾಸೋಹದ ಜೊತೆಗೆ ಅಕ್ಷರದಾಸೋಹ ಮಾಡಿ ಈ ಭಾಗ ಶೈಕ್ಷಣಿಕವಾಗಿ ಬೆಳೆಯಲು ಭದ್ರ ಬುನಾದಿ ಹಾಕಿದ್ದಾರೆ ಎಂದು ಶರಣಬಸವೇಶ್ವರ ಪದವಿಪೂವ೯ ಮಹಾವಿದ್ಯಾಲಯದ ಪ್ರಾಚಾಯ೯ರಾದ ಪ್ರೊ.ಬಾಬುರಾವ ಚವ್ಹಾಣ ಹೇಳಿದರು.
ಶರಣಬಸವೇಶ್ವರ ದೇವಸ್ಥಾನದಲ್ಲಿ ೩೦ ದಿನಗಳ ಸಾಂಸ್ಕೃತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಗುರುವಾರ ಶರಣಬಸವೇಶ್ವರ ಸಂಸ್ಥಾನದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಂಸ್ಥೆ ವಿಷಯ ಕುರಿತು ಮಾತನಾಡಿದರು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಮನಗಂಡು ಪೂಜ್ಯ ದೊಡ್ಡಪ್ಪ ಅಪ್ಪ ಅವರು 1934 ರಲ್ಲಿ ಮಹಾದೇವಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆರಂಭಿಸಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದರೆ, ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಾಗುತ್ತದೆ. ನಿಜಾಮನ ದೌಜ೯ನ್ಯದ ಆಡಳಿತ ಇದ್ದಾಗ ಅಪ್ಪ ಅವರು ಹೆಣ್ಣು ಮಕ್ಕಳಿಗೆ ಟಾಂಗಾ ಡಮಣಿಗಳನ್ನು ಕಳುಹಿಸಿ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಶಿಕ್ಷಣದಿಂದ ಮಾತ್ರ ಮುಕ್ತಿ ಪಡೆಯಲು ಸಾಧ್ಯವಿದೆ ಎಂದು ತಿಳಿದಿದ್ದರು. ಅಂದು ಪೂಜ್ಯ ದೊಡ್ಡಪ್ಪ ಅಪ್ಪ ಅವರು ಹಚ್ಚಿದ ಶಿಕ್ಷಣದ ಸಸಿ ಇಂದು ಹೆಮ್ಮರವಾಗಿ ಬೆಳೆಸಿದರು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಪ್ರಾಥಮಿಕ ಶಾಲೆಯಿಂದ ಇಂದು ವಿಶ್ವವಿದ್ಯಾಲಯ ಮಟ್ಟದವರೆಗೆ ಬೆಳೆಸಲು ಕಾರಣವಾಯಿತು. ೧೯೬೦ ರಲ್ಲಿ ಮಹಾದೇವಿ ಹೆಣ್ಣುಮಕ್ಕಳ ಪ್ರೌಢಶಾಲೆ, ೧೯೬೭ ರಲ್ಲಿ ಕನ್ಯಾ ಮಹಾದೇವಿ ಪ್ರೌಢಶಾಲೆ ಆರಂಭವಾಯಿತು. 20೦೬ ರಲ್ಲಿ ಬಸವಕಲ್ಯಾಣದಲ್ಲಿ ಶರಣಬಸವೇಶ್ವರ ವಸತಿ ಶಾಲೆ, 2011 ರಲ್ಲಿ ಶರಣಬಸವ ವಸತಿ ಪಬ್ಲಿಕ್‌ ಶಾಲೆಯನ್ನು ಪೂಜ್ಯ ಡಾ.ಅಪ್ಪಾಜಿಯವರು ಆರಂಭಿಸಿದರು. ಶರಣಬಸವೇಶ್ವರ ಶಾಲೆಯಲ್ಲಿ ಕಲಿತ ವಿದ್ಯಾಥಿ೯ಗಳು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾಯ೯ನಿವ೯ಹಿಸುತ್ತಿದ್ದಾರೆ. ಇಂಜಿನಿಯರ್‌, ವೈದ್ಯರಾಗಿ, ರಾಜಕೀಯ ವ್ಯಕ್ತಿಗಳಾಗಿ, ಅಧಿಕಾರಿಗಳಾಗಿ ಸೇವೆಗೈಯುತ್ತಿದ್ದಾರೆ. ೨೦೧೭ ರಲ್ಲಿ ಶರಣಬಸವ ವಿಶ್ವವಿದ್ಯಾಲಯ ಆರಂಭಿಸಿದ ಪೂಜ್ಯ ಡಾ.ಅಪ್ಪಾಜೀಯವರು ಈ ಭಾಗವನ್ನು ಶೈಕ್ಷಣಿಕ ಹಬ್‌ ಆಗಿ ಪರಿವತಿ೯ಸಿದ್ದಾರೆ ಎಂದು ಹೇಳಿದರು.