ನಾಗಾವಿ ಹಾಗೂ ಕಾಳಗಿ ಸ್ಮಾರಕಗಳ ಸಂರಕ್ಷಣೆಗೆ ಕ್ರಮ, ಪ್ರವಾಸಿಗಳಿಗೆ ಸೌಲಭ್ಯ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ:ಆ.22: ಜಿಲ್ಲೆಯ ನಾಗಾವಿ ಮತ್ತು ಕಾಳಗಿಯಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವದರೊಂದಿಗೆ ಈ ಎರಡು ಸ್ಥಳಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದಲೂ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ ಸಚಿವರು, ಜಿಲ್ಲೆಯ ನಾಗಾವಿ, ಸನ್ನತಿ, ಕಾಳಗಿ, ಮಳಖೇಡ್, ಶಹಬಾದ್, ಫಿರೋಜಾಬಾದ್ ಹಂಪಾಪುರ, ಕನಗನಹಳ್ಳಿ ಐತಿಹಾಸಿಕ ಸ್ಮಾರಕಗಳನ್ನು ಹೊಂದಿವೆ. ಈ ಸ್ಮಾರಕಗಳನ್ನು ಮರಳಿ ಹಿಂದಿನ ರೂಪಕ್ಕೆ ತರುವದರೊಂದಿಗೆ ಮುಂದಿನ ಪೀಳಿಗೆಗಾಗಿ ಈ ಸ್ಥಳಗಳನ್ನು ಸಂರಕ್ಷಿಸಲಾಗುತ್ತಿದೆ ಹಾಗೂ ಇತಿಹಾಸದ ಬಗ್ಗೆ ಕುತೂಹಲ ಇರುವವರಿಗೆ ಇಲ್ಲಿನ ಐತಿಹಾಸಿಕ ಮಹತ್ವವನ್ನು ದಾಖಲೆ ಮಾಡಲಾಗುವುದು ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದ ರಸ್ತೆ, ನೀರು, ಶೌಚಾಲಯ ಮತ್ತಿತರ ಸೌಲಭ್ಯಗಳನ್ನು ರೂಪಿಸಲಾಗುವುದು ಎಂದರು.
ಕಾಳಗಿಯಲ್ಲಿನ ನರಸಿಂಗಸ್ವಾಮಿ, ಸೂರ್ಯನಾರಾಯಣಸ್ವಾಮಿ ಹಾಗೂ ಕಾಳೇಶ್ವರ್ ದೇಗುಲಗಳು ಐತಿಹಾಸಿಕ ಮಹತ್ವವನ್ನು ಹೊಂದಿದ್ದು, ಸಾವಿರಾರು ಮಂದಿ ಈ ದೇಗುಲಗಳಿಗೆ ಭೇಟಿ ನೀಡುತ್ತಾರೆ, ಈ ಸ್ಥಳಗಳನ್ನು ರಕ್ಷಣೆ ಮಾಡಿ, ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು. ಹೊಳಕುಂಡದ ಬಳಿ 28 ಎಕರೆ ವ್ಯಾಪ್ತಿಯಲ್ಲಿರುವ ಗುಮ್ಮಟಗಳನ್ನು ಸಂರಕ್ಷಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೂಡಾ ಅವರು ತಿಳಿಸಿದರು.