ರಾಜ್ಯಪಾಲರಿಗೆ ಅವಮಾನ :ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
ಕಲಬುರಗಿ,ಆ 22: ಕರ್ನಾಟಕದ ರಾಜ್ಯಪಾಲರಿಗೆ ಅವಮಾನ ಮಾಡಿದ ಕಾಂಗ್ರೆಸ್ ಕ್ರಮವನ್ನು ಖಂಡಿಸಿ ಹಾಗೂ ಹಗರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಇಂದು ಕಲ್ಯಾಣ ಕರ್ನಾಟಕದ ಕಲಬುರಗಿ,ಬೀದರ,ಯಾದಗಿರಿ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕಲಬುರಗಿಯಲ್ಲಿ ಇಂದು ಬೆಳಿಗ್ಗೆ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆಗಳನ್ನೂ ಕೂಗಿ ಫಲಕಗಳನ್ನು ಪ್ರದರ್ಶಿಸಿದರು.
ಕಾಂಗ್ರೆಸ್ ಪ್ರತಿಭಟನೆ ಸಂದರ್ಭದಲ್ಲಿ ರಾಜ್ಯಪಾಲರ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ. ಅಲ್ಲದೆ, ಕೆಲವೆಡೆ ಭಾವಚಿತ್ರವನ್ನು ದಹಿಸಲಾಗಿದೆ. ಇದಲ್ಲದೆ, ಸಚಿವರಾದ ಜಮೀರ್ ಅಹ್ಮದ್, ಕೃಷ್ಣಬೈರೇಗೌಡ, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಮೊದಲಾದವರು ರಾಜ್ಯಪಾಲರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೊಟ್ಟಿದ್ದಾರೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರು ಪ್ರಧಾನಿಯವರ ವಿರುದ್ಧ ಆಕ್ಷೇಪಾರ್ಹ ಮಾತನಾಡಿದ್ದಾರೆ. ಹಿಂಸೆಗೆ ಪ್ರಚೋದಿಸುವ ಹೇಳಿಕೆಗಳನ್ನು ಕಾಂಗ್ರೆಸ್ಸಿಗರು ನೀಡುತ್ತಿದ್ದು, ಇದರ ವಿರುದ್ಧ ಪೆÇಲೀಸ್ ಇಲಾಖೆಯು ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ಮುಡಾ ಹಗರಣ ಮತ್ತು ಸಂವಿಧಾನಕ ಹುದ್ದೆಯಲ್ಲಿರುವ ದಲಿತ ರಾಜ್ಯಪಾಲ ಅವರಿಗೆ ಅವಮಾನಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಬೃಹತ್ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಿತು. ರಾಜ್ಯ ಕೋರ್ ಕಮಿಟಿ ಸದಸ್ಯರು, ಸ್ಥಳೀಯ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಕಲಬುರಗಿ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ,ನಗರಾಧ್ಯಕ್ಷ ಚಂದು ಪಾಟೀಲ,ಶಶೀಲ ನಮೋಶಿ, ರಾಜಕುಮಾರ ಪಾಟೀಲ ತೇಲ್ಕೂರ,ದತ್ತಾತ್ರೇಯ ಪಾಟೀಲ ರೇವೂರ,ಬಸವರಾಜ ಮತ್ತಿಮೂಡ,ಡಾ.ಅವಿನಾಶ ಜಾಧವ,ಶೋಭಾ ಬಾಣಿ,ಅರುಣಕುಮಾರ ಪಾಟೀಲ.ಕೂಡಲಹಂಗರಗಾ,ಶರಣಪ್ಪ ತಳವಾರ,ಅವ್ವಣ್ಣ ಮ್ಯಾಕೇರಿ,ಅಂಬಾರಾಯ ಅಷ್ಟಗಿ,ಡಾ.ಸುಧಾ ಹಾಲ್ಕಾಯಿ ಅವರು ಸೇರಿದಂತೆ ಹಲವಾರು ಮುಖಂಡರು ಕಾರ್ಯಕರ್ತರು ಪಾಲ್ಗೊಂಡರು.