ಡಿ. ದೇವರಾಜ್ ಅರಸ್‍ರು ಸಾಮಾಜಿಕ ಬದಲಾವಣೆ ರೂವಾರಿ: ಅಣ್ಣಾರಾವ್
ಆಳಂದ:ಆ.22: ದೇವರಾಜ ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಅತ್ಯಂತ ಮಹತ್ವದ ಕೊಡುಗೆ ನೀಡಿದ್ದು, ಹಿಂದುಳಿದ ವರ್ಗಗಳಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಬಲವರ್ಧನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್ ಹೇಳಿದರು.
ಪಟ್ಟಣದ ಹೊರವಲಯದ ತಾಲೂಕು ಆಡಳಿತಸೌಧನಲ್ಲಿ ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ಡಿ. ದೇವರಾಜ್ ಅರಸ್ ಅವರ 109ನೇ ಜನ್ಮದಿನಾಚರಣೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಅವರ ನಾಯಕತ್ವವು ಸಾಮಾಜಿಕ ಬದಲಾವಣೆಗೆ ಆಧಾರವಾಗಿದ್ದು, ಈ ಕೊಡುಗೆಗಳನ್ನು ವಿದ್ಯಾರ್ಥಿಗಳು ಗಮನಿಸಿ ಸಮಾಜದಲ್ಲಿ ಪರಿವರ್ತನೆ ತರುವ ಕಾರ್ಯವನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.
ಅರಸು ಅವರ ಜೀವನದ ಪ್ರಮುಖ ಘಟನೆಗಳನ್ನು ಉಲ್ಲೇಖಿಸುತ್ತ, ಅವರು ಮುಖ್ಯಮಂತ್ರಿಯಾಗಿ ಬಡವರ, ಹಿಂದುಳಿದ ವರ್ಗಗಳ, ಮತ್ತು ರೈತ ಸಮುದಾಯದ ಏಳಿಗೆಗಾಗಿ ಕೈಗೊಂಡ ತೀರ್ಮಾನಗಳು ರಾಜ್ಯದ ಅಭಿವೃದ್ಧಿಯ ದಿಕ್ಕನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಅವರು ಭೂ ಸುಧಾರಣೆ, ಜೀತ ಪದ್ಧತಿಯ ನಿರ್ಮೂಲನೆ, ಹಾಗೂ ಕಾನೂನು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಸಮಾನ ಹಕ್ಕುಗಳಿಗೆ ಒತ್ತಾಯಿಸಿದ ನಿಲುವುಗಳು ಕರ್ನಾಟಕದ ಸಾಮಾಜಿಕ ಬದಲಾವಣೆಗೆ ಕಾರಣವಾಗಿವೆ ಎಂದು ಅವರು ಹೇಳಿದರು.
ಅವರನ್ನು ಒಂದು ದಿಟ್ಟ ಮತ್ತು ಪ್ರಗತಿಪರ ನಾಯಕ ಎಂದು ಅಭಿವಂದಿಸಿ, ಪಾಟೀಲ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಡಾ. ದೇವರಾಜ ಅರಸು ಅವರ ಆದರ್ಶಗಳಿಂದ ಪ್ರೇರಣೆಯಾಗಬೇಕೆಂದು ಕರೆ ನೀಡಿದರು.
ಸಂಬುದ್ಧ ಪದವಿ ಪ್ರಾಚಾರ್ಯ ಸಂಜಯ ಎಸ್. ಪಾಟೀಲ್ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಹಾಸ್ಟೆಲ್ ವಿದ್ಯಾರ್ಥಿಗಳಿಗಾಗಿ ನಡೆದ ಭಾಷಣ, ಗಾಯನ, ಪ್ರಬಂಧ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಜಿ. ಹಳ್ಳದ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶರಣಬಸಪ್ಪ ಪಾಟೀಲ, ಪಂಡಿತ ಖಾನಾಪೂರೆ ಸರಸಂಬಾ, ಸಾತಲಿಂಗಪ್ಪ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಸತಿ ನಿಲಯ ಮೇಲ್ವಿಚಾರಕ ಹಣಮಂತ ಬಿರಾದಾರ ನಿರೂಪಿಸಿದರು. ಸಿಬ್ಬಂದಿ ಶೇರಿಕಾರ ವಂದಿಸಿದರು.