ರಾಜಕಾಲುವೆ ಅಂತ್ಯದವರೆಗೂ ನಿರ್ಮಿಸಿ
ಬೀದರ್: ಆ.22:ಇಲ್ಲಿಯ ಬಸವೇಶ್ವರ ವೃತ್ತ ಸಮೀಪದಿಂದ ಹಾರೂರಗೇರಿ ಮಾರ್ಗವಾಗಿ ಹಾದು ಹೋಗಿರುವ ರಾಜಕಾಲುವೆ ಕಾಮಗಾರಿಯನ್ನು ಅಂತ್ಯದವರೆಗೂ ಪೂರ್ಣಗೊಳಿಸಬೇಕು ಎಂದು ನಗರದ ಹಾರೂರಗೇರಿ ನಿವಾಸಿಗಳು ಆಗ್ರಹಿಸಿದ್ದಾರೆ.
ಕಾಲೊನಿ ನಿವಾಸಿಗಳು ಬಸವೇಶ್ವರ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ಅವರ ನೇತೃತ್ವದಲ್ಲಿ ನಗರದಲ್ಲಿ ಪೌರಾಡಳಿತ ಸಚಿವ ರಹೀಂಖಾನ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ರಾಜಕಾಲುವೆ ನಿರ್ಮಾಣ ಕಾಮಗಾರಿಯನ್ನು ಹಾರೂರಗೇರಿಯ ಹನುಮಾನ ದೇವಸ್ಥಾನ ಸಮೀಪದವರೆಗೆ ಮಾತ್ರ ಕೈಗೊಳ್ಳಲಾಗಿದೆ. ಅಂತ್ಯದವರೆಗೂ ಪೂರ್ಣಗೊಳಿಸದ ಕಾರಣ ಮಳೆ ಸುರಿದಾಗ ಹೊಲಸು ನೀರು ಮುಂದಕ್ಕೆ ಹೋಗದೆ, ಪುನಃ ಹಿಂದಕ್ಕೆ ಬರುತ್ತಿದೆ. ಕಾಲೊನಿಯ ಮನೆಗಳಿಗೆ ನುಗ್ಗುತ್ತಿದೆ. ಕುಡಿಯುವ ನೀರಿನ ಬಾವಿಗಳನ್ನೂ ಸೇರುತ್ತಿದೆ ಎಂದು ಬಸವರಾಜ ಪಾಟೀಲ ಹೇಳಿದರು.
ರಾಜಕಾಲುವೆ ನಿಯಮವಾಗಿ ಸ್ವಚ್ಛಗೊಳಿಸುವ ಕೆಲಸ ಆಗುತ್ತಿಲ್ಲ. ಕಾಲುವೆಯ ಹೊಲಸು ನೀರಿನಿಂದಾಗಿ ಕಾಲೊನಿ ಜನರಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಆವರಿಸಿದೆ ಎಂದು ತಿಳಿಸಿದರು.
ಕೂಡಲೇ ರಾಜಕಾಲುವೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ರಾಜಕಾಲುವೆಯನ್ನು ಅಂತ್ಯದವರೆಗೂ ನಿರ್ಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಮಾಜಿ ಸದಸ್ಯ ಧನರಾಜ ಹಂಗರಗಿ, ಬಸವೇಶ್ವರ ಸಮಿತಿಯ ಉಪಾಧ್ಯಕ್ಷ ಬಸವರಾಜ ಅಮ್ಮಜಿ, ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣೆ, ಖಜಾಂಚಿ ಧನರಾಜ ಚಿಮಕೋಡೆ, ವಿಜಯಕುಮಾರ ಪಾಟೀಲ, ಜಗನ್ನಾಥ ಕಾಜಿ, ಮಲ್ಲಿಕಾರ್ಜುನ ಬಂತೆ, ಆಕಾಶ ಕಾಜಿ ಇದ್ದರು.