ಕಲ್ಯಾಣ ಕ್ರಾಂತಿ ವಿಜಯೋತ್ಸವ ವಿಶ್ವದ ಉತ್ಸವವಾಗಬೇಕು:ಡಾ. ಬಸವಲಿಂಗ ಪಟ್ಟದ್ದೇವರು
ಭಾಲ್ಕಿ: ಅ.2:ಶರಣರು ಕೊಟ್ಟ ಸಂದೇಶ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಇಡೀ ಜಗತ್ತಿನ ಉತ್ಸವವಾಗಬೇಕು ಎಂದು ಹಿರೇಮಠ ಸಂಸ್ಥಾನ ಹಿರಿಯ ಸ್ವಾಮೀಜಿ ಜಾಡೋಜ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ನಡೆದ ಮರಣವೇ ಮಹಾ ನವಮಿ ಹಾಗು ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಬ್ಬದ ಪೂರ್ವಬಾವಿ ಸಭೆ ಹಾಗು ಪತ್ರಿಕಾ ಗೋಷ್ಠಿಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಹನ್ನೆರಡನೇ ಶತಮಾನದಲ್ಲಿ ತತ್ವದ ಸಲುವಾಗಿ ಅನೇಕ ಶರಣರು ಬಲಿದಾನ ಮಾಡಿದ್ದಾರೆ. ಇದನ್ನು ಜಗತ್ತಿಗೆ ತಿಳಿಸುವ ಕಾರ್ಯವಾಗಬೇಕು. ಒಬ್ಬರು ತಮ್ಮ ಧರ್ಮದ ತತ್ವಕ್ಕಾಗಿ ಸಿಲುಬೆಗೆ ಏರಿದನ್ನು ಜನತೆ ದೇವರೆಂದು ಒಪ್ಪಿಕೊಂಡಿದೆ, ಆದರೆ ಹನ್ನೆರಡನೇ ಶತಮಾನದಲ್ಲಿ ನೂರಾರು ಶರಣರು ತತ್ವಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ್ದಾರೆ. ಆದರೆ ಮಾಹಿತಿ ಕೊರತೆಯಿಂದ ಇದನ್ನು ಜನಮಾನಸಕ್ಕೆ ಮುಟ್ಟಿಸಲು ಆಗಲಿಲ್ಲ. ಶರಣ ತತ್ವ ಮರಣವೇ ಮಹಾನವಮಿ ಮತ್ತು ತತ್ವಕ್ಕಾಗಿ ನಡೆದ ಜಯ ಕಲ್ಯಾಣ ಕ್ರಾಂತಿ ವಿಜಯೋತ್ಸವ ಜಗತ್ತಿನ ಹಬ್ಬವಾಗಿ ಪರಿಗಣಿಸಬೇಕು. ಭಾಲ್ಕಿಯಿಂದ ಪ್ರಾರಂಭವಾದ ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಬ್ಬವು ರಾಷ್ಟ್ರದಾದ್ಯಂತ ಎಲ್ಲರೂ ಆಚರಿಸುವಂತಾಗಬೇಕು. ತತ್ವಕ್ಕಾಗಿ, ಸಮಾನತೆಗಾಗಿ ಬಲಿದಾನ ಮಾಡಿದ ದಿನ ಇದಾಗಿದೆ. ಹೀಗಾಗಿ ರಾಷ್ಟ್ರಾಧ್ಯಕ್ಷರು ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಬ್ಬಕ್ಕೆ ಚಾಲನೆ ನೀಡುವ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದರು.
ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರ ಹಿನ್ನಲೆಯ ಉತ್ಸವ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಅ.3 ರಿಂದ ಅ.12 ರ ವರೆಗೆ ಚನ್ನಬಸವಾಶ್ರಮದಲ್ಲಿ ಆಚರಿಸಲಾಗುತ್ತಿದೆ. ಇದಕ್ಕೆ ಹೆಚ್ಚಿನ ಸಂಖೆಯಲ್ಲಿ ಮಹಿಳೆಯರೇ ನಡೆಸಿಕೊಡುತ್ತಲಿದ್ದಾರೆ. ಈ ನಿಮಿತ್ಯ ಚಂದ್ರಕಲಾ ಪ್ರಭುಡಿಗ್ಗೆಯವರ ಅಧ್ಯಕ್ಷತೆಯಲ್ಲಿ ಪ್ರತಿನಿತ್ಯ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೇ ಕದಳಿ ವೇದಿಕೆಯ ಅಧ್ಯಕ್ಷೆ ಮಲ್ಲಮ್ಮ ನಾಗನಕೆರೆ ಯವರಿಂದ ಅ.3 ರಿಂದ ಅ.11 ರ ವರೆಗೆ ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಗೆ ಶಿವಯೋಗ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಂದ್ರಕಲಾ ಪ್ರಭುಡಿಗ್ಗೆ, ನಾಡಿನ ಶಿವಶರಣೆರೆಲ್ಲರೂ ಸೇರಿಕೊಂಡು ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ. ಪ್ರತಿನಿತ್ಯ ವಿದ್ಯಾರ್ಥಿನಿರಿಂದ ಮರಣವೇ ಮಹಾನವಮಿ ಕುರಿತು ವಿಶೇಷ ಉಪನ್ಯಾಸ ನಡೆಸಲಾಗುವುದು ಎಂದು ಹೇಳಿದರು.
ಭಾಲ್ಕಿಯಲ್ಲಿ ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಬ್ಬವನ್ನು ಪ್ರತಿವರ್ಷ ದಸರಾ ಹಬ್ಬದಂದು ಲಿಂಗೈಕ್ಯ ಡಾ| ಚನ್ನಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ 1974 ರಿಂದ ಆಚರಿಸಲಾಗಿದೆ. ಇದಕ್ಕೆ ಹೆಚ್ಚಿನ ಪ್ರಚಾರ ದೊರೆತರೆ ತತ್ವ ನಿಷ್ಠೆಗಾಗಿ ಮಡಿದ ಮಹಾನಿಯರ ಹಬ್ಬ ವಿಶ್ವದ ಹಬ್ಬವಾಗುತ್ತದೆ.
ಮೂಢ ನಂಬಿಕೆ, ಅಂಧಶ್ರದ್ಧೆ ಹೊಗಲಾಡಿಸಿ, ಬಸವತತ್ವ ನಿಷ್ಠೆಯನ್ನು ಪ್ರತಿಯೊಬ್ಬರಲ್ಲಿ ಬೆಳೆಸುವ ನಿಟ್ಟಿನಲ್ಲಿ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಬ್ಬ ಆಚರಿಸಲಾಗುತ್ತಿದೆ. ತತ್ವ ನಿಷ್ಠೆಗಾಗಿ ಬಲಿದಾನ ಮಾಡಿದ ಶರಣರನ್ನು ನೆನೆಯುವುದೇ ಈ ಹಬ್ಬದ ವಿಶೇಷವಾಗಿದೆ.