3 ಹಂತದ ಸಿಡಿಮದ್ದು ತಾಲೀಮು ಯಶಸ್ವಿ
ಸಂಜೆವಾಣಿ ನ್ಯೂಸ್
ಮೈಸೂರು: ಅ.02:- ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿದ್ದು, ಗಜಪಡೆ ಹಾಗೂ ಅಶ್ವದಳಕ್ಕೆ ಮಂಗಳವಾರ ಅಂತಿಮ ಹಂತದ ಫಿರಂಗಿ ತಾಲೀಮನ್ನು ಯಶಸ್ವಿಯಾಗಿ ನಡೆಸಲಾಯಿತು.
ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ವೇಳೆ 21 ಸುತ್ತು ಕುಶಾಲತೋಪು ಸಿಡಿಸುವ ಸಂಪ್ರದಾಯವಿದ್ದು, ಈ ವೇಳೆ ಭಾರೀ ಸದ್ದಿಗೆ ಆನೆಗಳು ಹಾಗೂ ಅಶ್ವದಳ ಬೆದರದಂತೆ ಅಭ್ಯಾಸ ಮಾಡಿಸುವ ಸಲುವಾಗಿ ವಸ್ತುಪ್ರದರ್ಶನದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ 3ನೇ ಹಂತದ ಫಿರಂಗಿ ತಾಲೀಮು ನಡೆಸಲಾಯಿತು.
ಫಿರಂಗಿ ದಳದ ಸಿಎಆರ್ ಪೆÇಲೀಸರು 7 ಫಿರಂಗಿಗಳ ಮೂಲಕ ಮೂರು ಸುತ್ತಿನಲ್ಲಿ ಒಟ್ಟು 21 ಸಿಡಿಮದ್ದನ್ನು ಸಿಡಿಸಿ ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಭಾರೀ ಶಬ್ಧದ ತಾಲೀಮು ನೀಡಿದರು. ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ವಿಜಯ, ಲಕ್ಷ್ಮೀ, ಮಹೇಂದ್ರ, ಧನಂಜಯ, ಗೋಪಿ, ಭೀಮ, ಕಂಜನ್, ಪ್ರಶಾಂತ, ರೋಹಿತ್, ಏಕಲವ್ಯ, ಸುಗ್ರೀವ, ಹಿರಣ್ಯ ಸೇರಿದಂತೆ ಅಶ್ವಾರೋಹಿ ದಳದ 37 ಕುದುರೆಗಳು ಭಾಗವಹಿಸಿದ್ದವು. ಗಜಪಡೆಯ ಹಿರಿಯ ಸದಸ್ಯೆ ವರಲಕ್ಷ್ಮೀ ಆನೆಗೆ ವಯಸ್ಸಿನ ಕಾರÀಣಕ್ಕೆ ವಿಶ್ರಾಂತಿ ನೀಡಲಾಗಿತ್ತು.
ಶಬ್ದಕ್ಕೆ ಒಗ್ಗಿಕೊಂಡ ಆನೆಗಳು: ವಸ್ತುಪ್ರದರ್ಶನದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಮೊದಲ ಹಂತದ ತಾಲೀಮಿನಲ್ಲಿ ಎಲ್ಲಾ 14 ಆನೆಗಳೂ ಭಾಗವಹಿಸಿದ್ದವು. ಆದರೆ ಕುಶಲತೋಪು ಸಿಡಿಸುತ್ತಿದ್ದಂತೆ ಭಾರಿ ಶಬ್ದಕ್ಕೆ ರೋಹಿತ್, ಹಿರಣ್ಯ ಆನೆಗಳು ಹೆಚ್ಚಾಗಿ ಬೆದರಿ ವಿಚಿಲಿತಗೊಂಡಿದ್ದವು. 2ನೇ ತಾಲೀಲಿನಲ್ಲಿ ಬೆದರದೆ ಧೈರ್ಯ ಪ್ರದರ್ಶಿಸಿದ್ದವು. ಮೂರನೇ ಹಾಗೂ ಅಂತಿಮ ಸುತ್ತಿನ ತಾಲೀಮಿನಲ್ಲಿ ಭಾರೀ ಸದ್ದಿಗೆ ರೋಹಿತ್ ಸ್ವಲ್ಪವೂ ಕದಲಿದೆ ಧೈರ್ಯ ಪ್ರದರ್ಶಿಸಿದ. ಹಿರಣ್ಯಾ ಮೊದಲ ಸುತ್ತಿನಲ್ಲಿ ಕೊಂಚ ಬೆದರಿದರೂ ಉಳಿದೆರಡು ಸುತ್ತಿನಲ್ಲಿ ಬೆಚ್ಚಲಿಲ್ಲ. ಮಾವುತರು, ಕಾವಾಡಿಗಳು ಹಿರಣ್ಯಗಳನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ಉಳಿದೆಲ್ಲಾ ಆನೆಗಳು ಭಾರಿ ಶಬ್ಧಕ್ಕೆ ಒಗ್ಗಿಕೊಂಡವು. ಸಿಡಿಮದ್ದು ಸಿಡಿಯುತ್ತಿದ್ದಂತೆ ಮುಂದಡಿ ಹಿಡುತ್ತಾ ಜಂಬೂ ಸವಾರಿಗೆ ನಾವು ರೆಡಿ ಎಂಬ ಸಂದೇಶ ರವಾನಿಸಿದವು.
ಎರಡನೇ ತಾಲೀಮಿನಂತೆ ಇಂದು ತಾಲೀಮಿಗೂ ಮುನ್ನ ಆನೆಗಳ ಮುಂದೆ ಅಟಂಬಾಂಬ್ ಸಿಡಿಸಿ ಪ್ರಯೋಗ ಮಾಡಲಾಯಿತು. ಪಟಾಕಿ ಸಿಡಿತದ ಶಬ್ದಕ್ಕೆ ಒಗ್ಗಿಕೊಂಡ ನಂತರ ಸಿಡಿಮದ್ದು ಸಿಡಿಸಲಾಯಿತು.
ಸಿಎಫ್‍ಗಳಾದ ಮಾಲತಿಪ್ರಿಯ, ರಮೇಶ್‍ಕುಮಾರ್, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡಸೌರಭ್ ಕುಮಾರ್, ಡಿಸಿಪಿ ಮುತ್ತುರಾಜ್, ಆನೆ ವೈದ್ಯ ಡಾ.ಮುಜೀಬ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.